
ವಿಜಯಪುರ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಬಸವನ ಬಾಗೇವಾಡಿ ತಾಲೂಕಿನ ಕಚೇರಿಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.
ತಾಲೂಕು ಆಡಳಿತ ಸೌಧದಲ್ಲಿರುವ ಭೇ ತಹಶೀಲ್ದಾರ ಕಾರ್ಯಾಲಯದ ಭೂಮಿ ಕೇಂದ್ರದ ಪ್ರಗತಿ ಪರಿಶೀಲನೆ ನಡೆಸಿದರು.ಕಚೇರಿಯ ವಿಭಾಗಗಳ ಬಾಕಿಯಿರುವ ಕಡತ-ವಹಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಕಚೇರಿ ಕಾರ್ಯ ನಿಮಿತ್ತ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿದ್ದು, ಸಕಾಲದಲ್ಲಿ ಅವರ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಡಲು ಸೂಚನೆ ನೀಡಿದರು.
ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಿ,ಕಡತಗಳ ವಿಲೇವಾರಿ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಕಂದಾಯ ಇಲಾಖೆಯ ಭೂ ಸುರಕ್ಷಾ ಕಾರ್ಯದ ಆಧುನಿಕ ಅಭಿಲೇಖಾಲಯಕ್ಕೆ ಭೇಟಿ ನೀಡಿ, ಕಡತ-ವಹಿಗಳ ಸ್ಕ್ಯಾನಿಂಗ್ ಅಪಲೋಡಿಂಗ್ ಹಾಗೂ ಡಾಟಾ ಎಂಟ್ರಿ ಹಾಗೂ ಶಿರಸ್ತೇದಾರರ ಅನುಮೋದನೆ ಕುರಿತು ಪರಿಶೀಲಿಸಿ ಡಿಜಿಟಲ್ ದಾಖಲೆಗಳ ವಿತರಣೆಯ ಕುರಿತು ಪರಿಶೀಲಿಸಿ, ಸಾರ್ವಜನಿಕರಿಗೆ ಅನುಕೂಲಕರವಾಗುವ ದೃಷ್ಟಿಯಿಂದ ಪ್ರತಿ ನಿತ್ಯ 15000-20000 ಪುಟಗಳ ಸ್ಕ್ಯಾನಿಂಗ್ ಕಾರ್ಯ ನಿರ್ವಹಿಸುವಂತೆಯೂ ಹಾಗೂ ಸ್ಕ್ಯಾನಿಂಗ್ ಕಾರ್ಯವನ್ನು ಡಿಸೆಂಬರ್ ಮಾಹೆಯ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಆಡಳಿತ ಸೌಧದಲ್ಲಿರುವ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿಗೆ ಹಾಗೂ ಆಡಳಿತ ಸೌಧದಲ್ಲಿರುವ ಎಲ್ಲ ಕಚೇರಿ ಹಾಗೂ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಸ್ವೀಕೃತವಾಗುತ್ತಿರುವ ಅರ್ಜಿ ಹಾಗೂ ವಿಲೇವಾರಿ ಕುರಿತು ಪರಿಶೀಲನೆ ಮಾಡಿದರು.
ಪುರಸಭೆಯ ವ್ಯಾಪ್ತಿಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಹಸಿ ಕಸ ಒಣ ಕಸ ವಿಂಗಡಿಸಿ ವಿಲೇವಾರಿ ಕ್ರಮಕ್ಕೆ ಪುರಸಭೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಂಗನವಾಡಿ ಕೇಂದ್ರಕ್ಕೆ ಸ್ವೀಕೃತವಾಗುತ್ತಿರುವ ಆಹಾರ ಸಾಮಗ್ರಿ, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ನಿಯಮಿತವಾಗಿ ಆಹಾರ ವಿತರಣೆ ಮಾಡುತ್ತಿರುವ ಕುರಿತು ಪರಿಶೀಲಿಸಿದ ಅವರು, ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ, ಒಪಿಡಿ ವಿಭಾಗ, ಆಪರೇಶನ್ ಥೇಟರ್, ಡೆಂಟಲ್ ವಿಭಾಗ, ಔಷಧಗಳ ವಿತರಣೆ, ಆಕ್ಸಿಜನ್ ಘಟಕವನ್ನು ಪರಿಶೀಲಿಸಿದರು. ಆಸ್ಪತ್ರೆಯ ಸ್ವಚ್ಛತೆ ಹಾಗೂ ಅಗತ್ಯ ಆರೋಗ್ಯ ಸೇವೆಗಳ ಕುರಿತ ಅಗತ್ಯ ಸಲಹೆ ಹಾಗೂ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ವೈ ಎಸ್ ಸೋಮನಕಟ್ಟಿ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande