

ಬಳ್ಳಾರಿ, 19 ನವೆಂಬರ್ (ಹಿ.ಸ.) :
ಆ್ಯಂಕರ್ : ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರ ವಿತರಿಸಲು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆದು, ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋವಿಂದ್ ಅವರು, ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಲಕ್ಷಾಂತರ ಜನರು ಇದ್ದಾರೆ. ಈ ಕೃಷಿಕರು 60-70 ವರ್ಷಗಳಿಗಿಂತ ಹಿಂದಿನಿಂದಲೂ ಈ ಭೂಮಿಯಲ್ಲಿ ಬೆಳೆ ಬೆಳೆಯುತ್ತಾ ಬಂದಿದ್ದು ಅವರಿಗೆಲ್ಲರಿಗೂ ಭೂ ಒಡೆತನ ನೀಡಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಈ. ಹನುಮಂತಪ್ಪ ಅವರು, ಬಗರ್‍ಹುಕುಂ ಸಾಗುವಳಿದಾರರ ಅವಶ್ಯಕತೆಯನ್ನು ಗ್ರಹಿಸಿ ಸರ್ಕಾರ ಇವರಿಗೆ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿ ಹಲವಾರು ವರ್ಷಗಳೇ ಕಳೆದಿದ್ದರೂ ಸಹ ಇಂದಿಗೂ ಹಕ್ಕುಪತ್ರಗಳು ಅವರ ಕೈಸೇರಿಲ್ಲ. ಹಕ್ಕುಪತ್ರವನ್ನು ವಿತರಿಸವ ಸಲುವಾಗಿ ಉಪಗ್ರಹದ ಮೂಲಕ ಸಮೀಕ್ಷೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಅವರು, ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು. ಉಪಗ್ರಹದ ಮೂಲಕ ಸಮೀಕ್ಷೆ ಬದಲಾಗಿ, ನೇರವಾಗಿ ಸಮೀಕ್ಷೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತರಾದ ರಾಮದಾಸ್, ಮಲ್ಲಪ್ಪ, ತಿಪ್ಪಯ್ಯ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್