
ಬೆಂಗಳೂರು, 19 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜಧಾನಿ ಬೆಂಗಳೂರಿನಲ್ಲಿ ಇಂದು ಎಟಿಎಂಗೆ ಹಣ ಸಾಗಿಸುವ ವಾಹನವನ್ನು ರಸ್ತೆ ಮಧ್ಯೆದಲ್ಲಿ ಅಡ್ಡಗಟ್ಟಿ ದರೋಡೆಕೋರರು ಕೋಟ್ಯಂತರ ರೂಪಾಯಿ ದರೋಡೆ ಮಾಡಿದ ಘಟನೆ ಜಯದೇವ ಡೈರಿ ವೃತ್ತದಲ್ಲಿ ನಡೆದಿದೆ.
ಜಯದೇವ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ಈ ಘಟನೆ ನಡೆದಿದ್ದು, ವಾಹನದಲ್ಲಿದ್ದ 7 ಕೋಟಿ 11 ಲಕ್ಷ ರೂಪಾಯಿ ಹಣವನ್ನ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ.
ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂಗೆ ಹಣ ಹಾಕಲೆಂದು GJ 01 HT 9173 ಸಂಖ್ಯೆ ವಾಹನ ಹಣ ತುಂಬಿಕೊಂಡು ತೆರಳುತ್ತಿತ್ತು. ಈ ವೇಳೆ ಜಯದೇವ ಡೈರಿ ಸರ್ಕಲ್ನಲ್ಲಿ ಇನ್ನೋವಾ ವಾಹನದಲ್ಲಿ ಬಂದ 6-7 ಜನರ ತಂಡ, ಎಟಿಎಂ ವಾಹನ ತಡೆದು ನಾವು ಆರ್ಬಿಐನವರು ಎಂದು ಹೇಳಿ ಹೆದರಿಸಿದ್ದಾರೆ. ಗನ್ಮ್ಯಾನ್ ಸೇರಿದಂತೆ ಉಳಿದವರನ್ನೆಲ್ಲ ಹಣ ತುಂಬಿದ್ದ ವಾಹನದಿಂದ ಇಳಿಸಿ ವಾಹನ ಸಮೇತ ಚಾಲಕನನ್ನ ಡೈರಿ ಸರ್ಕಲ್ಗೆ ಕರೆದೊಯ್ದುದು, ಬಳಿಕ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ನಿಲ್ಲಿಸಿ ವಾಹನದಲ್ಲಿದ್ದ ಹಣವನ್ನು ಇನ್ನೋವಾ ಕಾರಿಗೆ ಸ್ಥಳಾಂತರಿಸಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಗುಂಟೆಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಟಿಎಂ ವಾಹನದಲ್ಲಿ ಒಟ್ಟು 4 ಜನ ಸಿಎಂಎಸ್ ಸಿಬ್ಬಂದಿ, ಓರ್ವ ಚಾಲಕ, ಇಬ್ಬರು ಗನ್ ಮ್ಯಾನ್ ಹಾಗೂ ಮತ್ತೊಬ್ಬ ಹಣ ಹಾಕುವ ಸಿಬ್ಬಂದಿ ಇದ್ದು, ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಇವರ ವಿಚಾರಣೆ ನಡೆಯುತ್ತಿದೆ.
ಮೇಲ್ನೋಟಕ್ಕೆ ಸಿಎಂಎಸ್ ವಾಹನ ಚಾಲಕ, ಸಿಬ್ಬಂದಿ ಮೇಲೆ ಅನುಮಾನ ಮೂಡಿದೆ. ಈ ಹಿನ್ನೆಲೆ ಪೊಲೀಸರು ಚಾಲಕನ ಪೂರ್ವಾಪರ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಸಿದ್ಧಾಪುರ ಹಾಗೂ ಆಡುಗೋಡಿ ಪೊಲೀಸರಿಂದಲೂ ಸ್ಥಳ ಪರಿಶೀಲನೆ ನಡೆಯುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗುತ್ತಿದ್ದು ನಗರದಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಯೊಂದು ವಾಹನ ತಪಾಸಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೋಲಿಸ್ ಆಯುಕ್ತ ಸೀಮಂತಕುಮಾರ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa