
ಕೋಲಾರ, ೧೩ ನವೆಂಬರ್ (ಹಿ.ಸ) :
ಆ್ಯಂಕರ್ : ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಕೀಟನಾಶಕ ಗಳನ್ನು ಅಗತ್ಯ ಪ್ರಮಾಣಕ್ಕನುಗುಣವಾಗಿ ವಿತರಿಸಲು ಕೃಷಿ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು ಸೂಚನೆ ನೀಡಿದರು.
ಕೋಲಾರ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ದಿಶಾ’ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಜತೆಗೆ, ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಕಾಮಗಾರಿಗಳ ಪರಿಶೀಲನೆ, ಹಿಂದಿನ ಸಭೆಯ ಅನುಪಾಲನೆ ಕುರಿತು ಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಿತು.
ಕೆಲ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಕೊಂಡಾಡಿದ ಸಂಸದರು ಕೆಲ ಅಧಿಕಾರಿಗಳ ಕಾರ್ಯವೈಖರಿಗೆ ಕಿಡಿಕಾರಿದರು. ವಿವಿಧ ಕೆಲಸ ಕಾರ್ಯಗಳ ಕುರಿತು ಕೆಲ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ಅವರು ನೀಡಿದರು. ರೈಲ್ವೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿರುವ ಬಗ್ಗೆ ಅವರು ಸಭೆಯಲ್ಲಿದ್ದ ರೈಲ್ವೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ ರಸಗೊಬ್ಬರ ದಸ್ತಾನು ಸಮರ್ಪಕವಾಗಿಲ್ಲದಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಈ ಬಗ್ಗೆ ಸಂಸದ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ವಿಮರ್ಶೆಗೆ ಗುರಿಯಾಗಿಸಿದರು.
ಅಧಿಕಾರಿಗಳು ಸರಿಯಾಗಿ ರಸಗೊಬ್ಬರ ಬೇಡಿಕೆಯನ್ನು ಅಂದಾಜಿಸಿಲ್ಲ. ಇದರಿಂದಾಗಿ ರೈತರಿಗೆ ಬೇಡಿಕೆಗನುಗುಣವಾಗಿ ರಸಗೊಬ್ಬರ ದೊರೆಯುತ್ತಿಲ್ಲ. ವೈಜ್ಞಾನಿಕ ರೀತಿಯಲ್ಲಿ ಬೇಡಿಕೆಗಳನ್ನು ಪೂರೈಸಲು ಕ್ರಮ ವಹಿಸಬೇಕು. ಇಲ್ಲವಾದರೆ ಖಾಸಗಿ ವ್ಯಾಪಾರಸ್ಥರು ರೈತರನ್ನು ಸುಲಿಗೆ ಮಾಡುವ ಸಂಭವ ಇರುತ್ತದೆಂದು ಶಾಸಕ ಡಾ. ಕೊತ್ತೂರು. ಜಿ. ಮಂಜುನಾಥ್ ತಿಳಿಸಿದರು.
ತಡವಾಗಿ ಬಿದ್ದ ಮಳೆಯ ನಂತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು,ಪೆಬ್ರವರಿ ೨೦೨೬ರ ಅಂತ್ಯದ ವೇಳೆಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಂಸದರು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ರವಿ ಅವರು ಮಾತನಾಡಿ ಮಾನ್ಯ ಉಸ್ತುವಾರಿ ಸಚಿವರ ಅಧ್ಯಕ್ಷತೆ ಯಲ್ಲಿ ಕೆ ಡಿ ಪಿ ಸಭೆ ವೇಳೆಗೆ ಕಾಮಗಾರಿಗಳ ವಿವರ ತಿಳಿಸಬೇಕು ಎಂದ ಅವರು ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಾಕಿತು ಮಾಡಿದರು.
ಕೋಲಾರ ಹಾಗೂ ಮಾಲೂರು ವಿಧಾಸಭಾ ಕ್ಷೇತ್ರಗಳಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಅನಿಲ್ ಕುಮಾರ್ ರವರು ಸಾರ್ವಜನಿಕ ರಸ್ತೆ ಹಾಕುವ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ಮರಗಳನ್ನು ಹಾಕಿದ್ದು ಪ್ರಸ್ತುತ ಅರಣ್ಯ ಇಲಾಖೆಯಿಂದ ಅವನ್ನು ತೆರವುಗೊಳಿಸಡಾ ಹೊರಟು ರಸ್ತೆ ಕಾಮಗಾರಿ ಮುಂದುವರಿಯಲು ಬಿಡುತ್ತಿಲ್ಲ ಎಂದು ಕೋಲಾರ ಶಾಸಕರು ಒತ್ತಾಯಿಸಿದರು. ಎಲ್ಲರಿಗೂ ಇದಕ್ಕೆ ದನಿಗೂಡಿಸಿದರು. ಯಾವುದೇ ಅನುಮತಿ ಇಲ್ಲದೆ ರಸ್ತೆ ಕಾಮಗಾರಿ ಮುಂದುವರೆಸಲು ಆದೇಶಿಸಿದರು.
ಬಡವರ ಜಮೀನನ್ನು ಅರಣ್ಯ ಒತ್ತುವರಿ ನೆಪದಲ್ಲಿ ಮುಟ್ಟುಗೊಲು ಹಾಕಿಕೊಳ್ಳಲಾಗಿದೆ. ಕೂಡಲೇ ಒತ್ತುವರಿ ತೆರವು ಕಾರ್ಯಚರಣೆ ಸ್ಥಗಿತಗೊಳಿಸಿ ಜಂಟಿ ಸರ್ವೇ ನಡೆಸಿ ನಂತರ ಮುಂದುವರೆಯಲು ಆದೇಶಿಸುವಂತೆ ಸಭೆಗೆ ತಿಳಿಸಿದರು. ವಿಧಾನ ಪರಿಷತ್ ಶಾಸಕ ಇಂಚರ ಗೋವಿಂದರಾಜು ಅವರು ದನಿಗೂಡಿಸಿದರು.
ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಸುಪ್ರೀಂ ಕೋರ್ಟ್ ಆದೇಶದಂತೆ ಒತ್ತುವರಿ ತೆರವು ಕಾರ್ಯಚರಣೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹಿಂಜರಿಯುವ ಪ್ರಮೇಯ ಇಲ್ಲ ಎಂದು ಅರಣ್ಯ ಸಂರಕ್ಷಣಾ ಅಧಿಕಾರಿ ಉತ್ತರಿಸಿದರು.
ಜಲಜೀವನ್ ಮಿಷನ್ ಅಡಿ ಹಲವು ಗ್ರಾಮಗಳಿಗೆ ನೀರಿನ ಪೂರೈಕೆ ಆಗುತ್ತಿಲ್ಲ. ಹಲವು ಕಾಮಗಾರಿಗಳನ್ನು ಈವರೆಗೆ ಕೈಗೆತ್ತಿಕೊಂಡಿಲ್ಲ ಎಂದು ವಿಧಾನ ಪರಿಷತ್ ಶಾಸಕ ಎಂ. ಎಲ್. ಅನಿಲ್ ಕುಮಾರ್ ಆಗ್ರಹಿಸಿದರು ಇದಕ್ಕೆ ಕೋಲಾರ ಶಾಸಕ ಡಾ. ಕೊತ್ತೂರ್. ಜಿ ಮಂಜುನಾಥ್ ದನಿಗೂಡಿಸಿದರು. ಮೊದಲು ಓವರ್ ಹೆಡ್ ಟ್ಯಾಂ ಕ್ ಗಳನ್ನು ನಿರ್ಮಿಸಿ, ಕೊಳವೆಬಾವಿ ಕೊರೆಸಿ ನಂತರ ಪೈಪ್ಲೈನ್ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಸದರು ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಅನುದಾನವನ್ನು ನೀಡುತ್ತಿದ್ದು ಸುಮಾರು ೧೫೦ ಕೂ ಹೆಚ್ಚಿನ ಮನೆಗಳಿಗೆ ಎರೆಡೆರಡು ಬಿಲ್ ಗಳು ಪಾವತಿ ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು ಫಲಾನುಭವಿಗಳನ್ನು ಮಾನದಂಡಗಳ ಪ್ರಕಾರ ಆಯ್ಕೆ ಮಾಡುವಂತೆ ತಿಳಿಸಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತನಾಡಿ ಇಕೋ ಅನುಧಾನ,ಕ್ರೀಡಾ ಅನುದಾನ, ಸೇರಿದಂತೆ ಸಿವಿಲ್ ಕಾಮಗಾರಿಗಳು ನಡೆಯುತ್ತಿದ್ದು ೭ ಶಾಲೆಗಳಿಗೆ ಅನುಧಾನ ಬಿಡುಗಡೆಯಾಗಿದೆ ೪ ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ಅನುಧಾನದಲ್ಲಿ ಕರಾಟೆ ಅನುಧಾನ,ಅಟಲ್ ಟಿಂಕರಿಂಗ್ ಲ್ಯಾಬ್ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ತೋಟಗಾರಿಕಾ ಇಲಾಖೆ ಅಧಿಕಾರಿ ಕುಮಾರಸ್ವಾಮಿ ಅವರು ಮಾತನಾಡಿ, ತೋಟಗಾರಿಕೆ ಬೆಳೆಗಳಿಗೆ ರೈತರು ಅನಾಧಿಕೃತ ಕೀಟನಾಶಕಗಳನ್ನು ಬಳಸುತ್ತಿರುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದರು ಅಗ್ರಿ ಕ್ಲಿನಿಕ್ ಗಳನ್ನು ಸ್ಥಾಪಿಸಿ ಅವುಗಳ ಮೂಲಕ ರೈತರಿಗೆ ಸಮಗ್ರ ಮಾಹಿತಿ ನೀಡಬೇಕು ವೈಜ್ಞಾನಿಕ ವಿಧಾನ ಅನುಸರಿಸಲು ರೈತರಿಗೆ ಅರಿವು ಮೂಡಿಸಬೇಕು ಎಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೋಲಾರ ವಿಭಾಗ ನಿಯಂತ್ರಣ ಅಧಿಕಾರಿ ಮಾತನಾಡಿ ನೂತನವಾಗಿ ನಗರದಲ್ಲಿ ಸಾರಿಗೆಯನ್ನು ಪ್ರಾರಂಭ ಮಾಡಿರುವುದಾಗಿ ತಿಳಿಸಿದರು ನಂತರ ಸಂಸದರಾದ ಮಲ್ಲೇಶ್ ಬಾಬು ಅವರು ಮಾತನಾಡಿ ಇತ್ತೀಚಿಗೆ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಸುಮಾರು ೬೦೦೦ ವಿದ್ಯುತ್ ಚಾಲಿತ ಬಸ್ ಗಳು ಉದ್ಘಾಟನೆ ಮಾಡಿದರು ಅದರಲ್ಲಿ ಕೋಲಾರಕ್ಕೆ ಬರುತ್ತದಾ ಎಂದು ಕೇಳಿದಾಗ ಸದ್ಯಕ್ಕೆ ಇಲ್ಲ ಮುಂದಿನ ದಿನಗಳಲ್ಲಿ ಬರಬಹುದು ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಕುರಿತು ಮಾತನಾಡಿ ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಮತ್ತು ಕೆಲವು ಕಡೆ ಮನೆಗಳಲ್ಲಿಯೇ ಪಿಜಿ ಸೆಂಟರ್ ನಡೆಸುತ್ತಿದ್ದಾರೆ ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಇತ್ತೀಚಿಗೆ ಕೈಗಾರಿಕೆ ಪ್ರದೇಶಗಳಲ್ಲಿ ಹೊರ ರಾಜ್ಯದ ಯುವಕರು ಬಂದು ಕಾರ್ಯನಿರ್ವಹಿಸುತ್ತಿದ್ದಾರೆ ಅಂತಹವರ ಮೇಲೆ ನಿಗಾವಹಿಸಬೇಕು ಎಂದು ತಿಳಿಸಿದರು.
ಇದರ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ಮಾತನಾಡಿ ನಾವು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ಸಿಸಿ ಕ್ಯಾಮರಾ ಅಳವಡಿಸುವುದಾಗಿ ತಿಳಿಸಿದ್ದೇವೆ ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮದೊಂದಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಅಳಿಸುತ್ತಿದ್ದೇವೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್ ಅವರು ಮಾತನಾಡಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದವರು ಇರುವಂತಹ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.ಶಾಸಕರಾದ ವೆಂಕಟಶಿವರೆಡ್ಡಿ ಅವರು ಮಾತನಾಡಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಮುದಾಯ ಭವನಗಳ ನಿರ್ಮಾಣ ಬಾಕಿ ಇದೆ ಅದನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಕೋಲಾರ ವಿಧಾನಸಭಾ ಸದಸ್ಯರಾದ ಡಾ.ಕೊತ್ತೂರು ಜಿ.ಮಂಜುನಾಥ್, ಶ್ರೀನಿವಾಸಪುರ ಶಾಸಕ ಜಿ. ಕೆ. ವೆಂಕಟಾಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್,ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ. ನಿಖಿಲ್, ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಟಿ. ಕೆ. ರಮೇಶ್,ಯೋಜನ ನಿರ್ದೇಶಕರು,ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು , ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಚಿತ್ರ : ಕೋಲಾರ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ದಿಶಾ’ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಸಂಸದ ಎಂ. ಮಲ್ಲೇಶ್ ಬಾಬು ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್