
ಕೋಲಾರ, ೧೩ ನವೆಂಬರ್ (ಹಿ.ಸ) :
ಆ್ಯಂಕರ್ : ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಸುಕನ್ಯಾ ಅವರ ಮೇಲೆ ಹಲ್ಲೆ ನಡೆಸಿ, ತಲೆ ಬೋಳಿಸಿದ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ (ಎಂಜಿಎಸ್ಪಿ) ರಾಜ್ಯ ಕೋ ಚೇರ್ ಪರ್ಸನ್ ಕಾಂತಾದೇವಿ ತಿಳಿಸಿದರು.
ಕೋಲಾರ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಕನ್ಯಾ ಅವರನ್ನು ದುಷ್ಕರ್ಮಿಗಳು ಅಪಹರಿಸಿ ಬೆಂಗಳೂರಿನ ಕೃಷ್ಣರಾಜಪುರಂನಿಂದ ಕರೆದೊಯ್ದು ಅಕ್ರಮವಾಗಿ ಬಂಧನದಲ್ಲಿರಿಸಿ, ಕಟ್ಟಿಗೆಯಿಂದ ಹೊಡೆದು, ಅವರ ತಲೆ ಬೋಳಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿ, ಎಲ್ಲ ಆರೋಪಿಗಳನ್ನು ಬಂಧಿಸಿ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ಒಗ್ಗೂಡಿಸುವ ಮೂಲ ಮೌಲ್ಯಗಳಾದ ಪ್ರೀತಿ, ಸಹಕಾರ, ಪರಸ್ಪರ ಬೆಂಬಲ ಮತ್ತು ಕರುಣೆ ಕೆಲವು ವ್ಯಕ್ತಿಗಳ ಅಧಿಕಾರದ ದುರುಪಯೋಗದಿಂದ ಹಾಳಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ನಮ್ಮ ವಲಯಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು.
ಗಮನ ಮಹಿಳಾ ಸಮೂಹ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಶಾಂತಮ್ಮ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಿರಂತರ ನಡೆಯುತ್ತಲೇ ಬರುತ್ತಿದೆ. ನ್ಯಾಯ ಮತ್ತು ಹೊಣೆಗಾರಿಕೆಗೆ ಬದ್ಧರಾಗಿರುವ ಎಂಜಿಎಸ್ಪಿ ಸೇರಿದಂತೆ ನಾವೆಲ್ಲರೂ ಸೇರಿ ಹಿಂಸೆಯನ್ನು ತಡೆಯಲು ಮತ್ತು ಪ್ರತಿಕ್ರಿಸಲು ಸಮುದಾಯದ ನೇತೃತ್ವದ ವ್ಯವಸ್ಥೆಗಳನ್ನು ಬಲಪಡಿಸುವುದು, ಸಹಬಾಳ್ವೆ ಗಟ್ಟಿಗೊಳಿಸುವುದು, ಎಲ್ಲರಿಗೂ ಸುರಕ್ಷತೆ ಗೌರವ ಹಾಗೂ ಸಂವಿಧಾನದಡಿ ಐಕ್ಯತೆಯ ಸಂಸ್ಕೃತಿಯನ್ನು ಉತ್ತೇಜಿಸುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.
ಸುಕನ್ಯಾ ಅನುಭವಿಸಿದ ಹಿಂಸೆ ಮಾನವ ಮತ್ತು ಗೌರವದಿಂದ ಬದುಕುವ ಹಕ್ಕಿಗೆ ಉಲ್ಲಂಘನೆಯಾಗಿದೆ. ಅವರಿಗಾದ ಅನ್ಯಾಯದ ಬಗ್ಗೆ ಸೇರಿದಂತೆ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ಸುರಕ್ಷತೆಗೆ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಂಜಿಎಸ್ಪಿ ಸದಸ್ಯರಾದ ಸ್ಪೂರ್ತಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ನೇಮಕಾತಿ, ಉದ್ಯಮಶೀಲತೆ ಯೋಜನೆಗಳು ಸೇರಿದಂತೆ ಕೌಶಲ ಅಭಿವೃದ್ಧಿ ಮತ್ತು ಸಾಮರ್ಥ್ಯ ಅಭಿವೃದ್ಥಿ ಕಾರ್ಯಕ್ರಮಗಳನ್ನು ರೂಪಿಸಿ, ಜೀವನೋಪಾಯದ ಅವಕಾಶಗಳನ್ನು ಒದಗಿಸಬೇಕು. ಸರ್ಕಾರ ನಮ್ಮ ಸಮುದಾಯದವರಿಗೆ ಸುರಕ್ಷತೆ, ವಸತಿ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ (ಎಂಜಿಎಸ್ಪಿ) ಸದಸ್ಯರಾದ ಎನ್.ಸ್ಮಿತಾ, ಹೆಚ್.ಮನೋಜ್ ಕುಮಾರ್ ಉಪಸ್ಥಿತರಿದ್ದರು.
ಚಿತ್ರ ; ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ (ಎಂಜಿಎಸ್ಪಿ) ರಾಜ್ಯ ಕೋ ಚೇರ್ ಪರ್ಸನ್ ಕಾಂತಾದೇವಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್