ಜನರನ್ನು ಅಲೆದಾಡಿಸುವುದು ಅಕ್ಷಮ್ಯ : ಸಿದ್ದರಾಮಯ್ಯ ಎಚ್ಚರಿಕೆ
ಮೈಸೂರು ಜಿಲ್ಲಾ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ
Cm


ಮೈಸೂರು, 10 ನವೆಂಬರ್ (ಹಿ.ಸ.) :

ಆ್ಯಂಕರ್ : ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನಸೇವೆ ಕುರಿತ ನಿರಾಸೆಯನ್ನು ತೀವ್ರವಾಗಿ ವ್ಯಕ್ತಪಡಿಸಿದರು.

“ಜನರನ್ನು ಕಚೇರಿಗಳಲ್ಲಿ ಅಲೆದಾಡಿಸುವುದು ಅಕ್ಷಮ್ಯ. ನಾನು ಸಹಿಸಲ್ಲ,” ಎಂದು ಸ್ಪಷ್ಟ ಎಚ್ಚರಿಕೆ ನೀಡಿದ ಅವರು, ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲೇ ನೆಲೆಸಿ ಜನರ ಅಹವಾಲುಗಳನ್ನು ಕೇಳಬೇಕು, ಇಲ್ಲದಿದ್ದರೆ ವರದಿ ನೀಡಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಸಭೆಗೆ ಗೈರಾಗಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತಕ್ಷಣದ ಸೂಚನೆ ನೀಡಿದ ಸಿಎಂ, ದಸರಾ ಹಬ್ಬ ಯಶಸ್ವಿಗೊಳಿಸಿದ್ದಕ್ಕಾಗಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಆದರೆ, “ಹಿಂದಿನ ಸಭೆಯಲ್ಲಿ ನಿಗದಿತ ಅವಧಿಯಲ್ಲಿ ಕೆಲಸ ಪೂರೈಸುವ ಸೂಚನೆ ನೀಡಿದ್ದೆ, ಆದರೆ ಪ್ರಗತಿ ತೃಪ್ತಿಕರವಾಗಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಏಳನೆಯ ಸ್ಥಾನದಿಂದ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿರುವುದು ಸಿಎಂಗೆ ಆಘಾತ ಉಂಟುಮಾಡಿದ್ದು, ಹೊಸ ಡಿಡಿಪಿಐಗೆ ಉತ್ತಮ ಫಲಿತಾಂಶ ತರುವ ಬ್ಲೂಪ್ರಿಂಟ್ ಸಿದ್ಧಪಡಿಸಲು ಸೂಚನೆ ನೀಡಿದರು.

ವರ್ಗಾವಣೆಗಾಗಿ ಕಾರ್ಯಕರ್ತರ ಶಿಫಾರಸುಗಳನ್ನು ಒತ್ತಾಯಿಸುವುದು ಕೆಟ್ಟ ನಡವಳಿಕೆ ಎಂದು ಎಚ್ಚರಿಸಿದ ಸಿಎಂ, “ಇಂತಹವರು ಸರ್ಕಾರಕ್ಕೂ ಮತ್ತು ಕಾರ್ಯಕರ್ತರಿಗೂ ಕೆಟ್ಟ ಹೆಸರು ತರುತ್ತಾರೆ. ಇದನ್ನು ನಾನು ಸಹಿಸಲ್ಲ,” ಎಂದರು.

ಇದೇ ವೇಳೆ ಅಧಿಕಾರಿಗಳಿಗೆ — ಶಾಲೆ, ಆಸ್ಪತ್ರೆ, ಹಾಸ್ಟೆಲ್‌ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಹಾಸ್ಟೆಲ್‌ಗಳ ಆಹಾರ ವ್ಯವಸ್ಥೆ ನಿರಂತರವಾಗಿ ಪರಿಶೀಲಿಸಬೇಕು, ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

“ನಾವು ಐದು ವರ್ಷಕ್ಕೊಮ್ಮೆ ಬರುವವರು ಅಧಿಕಾರಿಗಳು ಶಾಶ್ವತರು ಎಂಬ ಭಾವನೆ ಬಿಟ್ಟು ಜನಸೇವೆಗೆ ತೊಡಗಿರಿ” ಎಂದು ಸಿದ್ದರಾಮಯ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande