
ಬಳ್ಳಾರಿ, 10 ನವೆಂಬರ್ (ಹಿ.ಸ.) :
ಆ್ಯಂಕರ್ : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ ಕಾರ್ಯಕ್ರಮಗಳಡಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ www.sw.kar.nic.in ಅಥವಾ https://ssp.postmatric.karnataka.gov.in/homepage.aspx ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಸೂಚನೆಗಳು :
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡಿ ಪ್ರಥಮ ಬಾರಿಗೆ, ಪ್ರಥಮ ಪ್ರಯತ್ನದಲ್ಲಿ ಪಾಸಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಹಿಂದಿನ ಸಾಲಿನಲ್ಲಿ ಅರ್ಜಿ ಸಲ್ಲಿಸಿ ವಿದ್ಯಾಥಿವೇತನ ಪಡೆದ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಹಿಂದಿನ ಸಾಲಿನಲ್ಲಿ ಅರ್ಜಿ ಸಲ್ಲಿಸದೇ ಇರುವ ವಿದ್ಯಾರ್ಥಿಗಳು ಪ್ರಸಕ್ತ ಸಾಲಿಗೆ ಅರ್ಜಿ ಸಲ್ಲಿಸಬಹುದು.
ಕಳೆದ ಸಾಲಿನಲ್ಲಿ ನಾನಾ ಕಾರಣಗಳಿಂದ ವಿದ್ಯಾರ್ಥಿ ವೇತನ ಮಂಜೂರಾಗದ ಹಾಗೂ ರಿಜೆಕ್ಟ್ ಆಗಿರುವ ವಿದ್ಯಾರ್ಥಿಗಳು ಮಾತ್ರ ಪ್ರಸಕ್ತ ಸಾಲಿನಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಎನ್‌ಪಿಸಿಐ ಆಧಾರ್ ಸೀಡಿಂಗ್ ಮಾಡಿಸಿರಬೇಕು. ತೊಂದರೆಯಿದ್ದಲ್ಲಿ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಬೇಕು. ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಪ್ರತಿ ಶೈಕ್ಷಣಿಕ ಸಾಲಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಪ್ರಸಕ್ತ ಸಾಲಿನಿಂದ ಪ್ರತಿ ಶಾಲಾ ಮುಖ್ಯೋಪಾಧ್ಯಾಯರು, ಹಾಗೂ ಕಾಲೇಜು ಪ್ರಾಂಶುಪಾಲರು ಗಳಿಗೆ ಸಬಲೀಕರಣ ಅಧಿಕಾರಿ ಅಥವಾ ಸಂಸ್ಥೆಯ ನೋಡಲ್ ಅಧಿಕಾರಿಯನ್ನು ನಿಯೋಜಿಸಿದ್ದು, ತಾಲ್ಲೂಕು ಲಾಗಿನ್‌ನಲ್ಲಿ ಸೇರ್ಪಡೆ ಮಾಡಿಕೊಳ್ಳಲು ಕ್ರಮವಹಿಸಬೇಕು. ನಂತರ ಸೇರ್ಪಡೆಯಾದ ಅಧಿಕಾರಿಗಳ ಇ-ಕೆವೈಸಿ ವಿವರಗಳನ್ನು ಅಪ್ಡೇಟ್ ಮಾಡಿ ಅನುಮೋದಿಸುತ್ತಾರೆ.
ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊದಲು ಬಯೋಮೇಟ್ರಿಕ್ ಇ-ಧೃಢಿಕರಣ/ಎನ್‌ಎಸ್‌ಪಿ ಒಟಿಆರ್ ನೊಂದಣಿಯನ್ನು ಮಾಡಿಸಿದ ನಂತರ ಎಸ್‌ಎಸ್‌ಪಿ ಯಲ್ಲಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಮೊದಲನೇ ರೈಲ್ವೇ ಗೇಟ್ ಹತ್ತಿರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ(ಗ್ರೇಡ್-1) ಕಚೇರಿ ಅಥವಾ ದೂ.08392-244738, ಮೊ.9480843073 ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್