


ಹೊಸಪೇಟೆ, 1 ನವೆಂಬರ್ (ಹಿ.ಸ.)
ಆ್ಯಂಕರ್ : ರಾಜ್ಯದ ಎಲ್ಲಾ ಮದರಸಾಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಹಾಗೂ ಉರ್ದು ಶಾಲೆಗಳಲ್ಲಿ ಪ್ರಥಮ ಭಾಷೆ ಕನ್ನಡ ಅಳವಡಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಹೇಳಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಆವರು ಮಾತನಾಡಿದರು.
ಕನ್ನಡ ಭಾಷಾ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ನೇತೃತ್ವದಲ್ಲಿ ಪ್ರಸ್ತುತ ವರ್ಷದಿಂದ ರಾಜ್ಯದಲ್ಲಿರುವ 4300 ಉರ್ದು ಶಾಲೆ ಹಾಗೂ ಎಲ್ಲಾ ಮದರಸಾಗಳಲ್ಲಿ ಕಡ್ಡಾಯವಾಗಿ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಉರ್ದು ಹಾಗೂ ತೃತೀಯ ಭಾಷೆ ಇಂಗ್ಲೀಷ್‍ನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಮೈಸೂರು ರಾಜ್ಯವನ್ನು 1973ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಓಬಳಶೆಟ್ಟಿಹಳ್ಳಿ ಗ್ರಾಮದ ಗೊಲ್ಲರ ಸೂಲಗಿತ್ತಿ ಈರಮ್ಮ 13 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಹಿನ್ನಲೆ ಸಮಾಜಸೇವಾ ಕಾರ್ಯ ಮತ್ತು ಹೊಸಪೇಟೆ ನಗರದ ಬಾಣದಕೇರಿ ನಿವಾಸಿ ಬಿ.ಮಾರುತಿ ಇವರಿಗೆ ಚಿತ್ರಕಲೆ ವಿಭಾಗದಲ್ಲಿ ರಾಜೋತ್ಸವ ಪ್ರಶಸ್ತಿ ದೊರೆತಿರುವುದು ತುಂಬಾ ಸಂತಸ ತಂದಿದೆ.
ಚುನಾವಣೆ ವೇಳೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಲ್ಲಿ ಅನುಷ್ಟಾನಕ್ಕೆ ತಂದು ಜನರಿಗೆ ತಲುಪಿಸಿದ್ದೇವೆ. ಆದರೆ ನಾವು ಆರನೇ ಗ್ಯಾರಂಟಿ ಘೋಷಣೆ ಮಾಡಿಲ್ಲ, ಆದರೆ ಅದು ಬಡಜನರ, ವಸತಿ ರಹಿತರ ಕಾಳಜಿಗೆ ವಿಶೇಷವಾಗಿ ಮನೆಗಳನ್ನು ನೀಡುವ ಚಿಂತನೆ ಮಾಡಲಾಗಿದೆ. ಸ್ಲಂಬೋರ್ಡ್ ನಿಂದ 1,80,253 ಮನೆಗಳು ಮತ್ತು ರಾಜೀವ್‍ಗಾಂಧಿ ವಸತಿ ನಿಗಮದಿಂದ 47,860 ಮನೆಗಳು ಸೇರಿ 2,030,900 ಮನೆಗಳನ್ನು ಈ ಹಿಂದಿನ ನಮ್ಮ ಸರ್ಕಾರದಲ್ಲಿ ಮಂಜೂರು ಮಾಡಲಾಗಿತ್ತು, ಇವುಗಳು ಕಾರಣಾಂತರದಿಂದ ಹಂಚಿಕೆಯಾಗಲಿಲ್ಲ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಂಜೂರು ಮಾಡಲಾಗುತ್ತದೆ.
ವಸತಿ ರಹಿತರ ಸಮಸ್ಯೆಗಳಿಗೆ ಸ್ಪಂದಿಸಿ ಕಳೆದ ವರ್ಷ 36799 ಮನೆಗಳನ್ನು ನೀಡಿ ಇದಕ್ಕಾಗಿ ರೂ.500 ಕೋಟಿ ಬಿಡುಗಡೆ ಮಾಡಲಾಗಿತ್ತು. ನವೆಂಬರ್ ತಿಂಗಳಲ್ಲಿ ಮತ್ತೆ 42345 ಮನೆಗಳನ್ನು ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ದೇಶನದಂತೆ 2026 ಅಂತ್ಯದೊಳಗೆ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುತ್ತದೆ. ಬೆಂಗಳೂರಿನಲ್ಲಿ ಬಡಜನತೆ ಅನುಕೂಲವಾಗುವ ನಿಟ್ಟಿನಲ್ಲಿ 2016 ರಲ್ಲಿ 1023 ಎಕರೆಯನ್ನು ರಾಜೀವ್ ಗಾಂಧಿ ವಸತಿ ಯೋಜನೆಗೆ ನೀಡಿ ಬಡಜನರಿಗೆ ಸ್ವಂತ ನಿವಾಸ ಕಟ್ಟಿಕೊಳ್ಳಲು ಸಹಕಾರ ಮಾಡಿದ್ದಾರೆ. ನಮ್ಮ ಸರ್ಕಾರ ಹೆಚ್ಚು ಬಡವರ ಅಭಿವೃದ್ದಿಗೆ ಶ್ರಮಿಸುವ ಸರ್ಕಾರವಾಗಿದೆ. ಇತ್ತೀಚಿಗೆ ಸಂಡೂರಿನಲ್ಲಿ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ 1600 ಕೋಟಿರೂ ಮತ್ತು ಕೊಪ್ಪಳದಲ್ಲಿ 950 ಕೋಟಿರೂ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲಗಳಾಗಿದೆ. ಈ ಯೋಜನೆಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದ್ದು ಆರ್ಥಿಕಮಟ್ಟ ಸುಧಾರಣೆಯಾಗಿದೆ ಎಂದರು.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪರೇಡ್ ಕಮಾಂಡರ್ ಗೋವಿಂದ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷದಳ, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಸೇರಿ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ಬಳಿಕ ವಿವಿಧ ಶಾಲಾ ಮಕ್ಕಳಿಂದ ಕನ್ನಡ ಭಾಷೆ ಮತ್ತು ನಾಡು, ನುಡಿಯ ಬಗ್ಗೆ ನೃತ್ಯ ಸಂಯೋಜನೆಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಸಲಾಯಿತು.
ವೇದಿಕೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ, ರಾಜ್ಯ ಉಪಧ್ಯಾಕ್ಷ ಎಸ್.ಆರ್.ಮೆಹರೂಜ್ ಖಾನ್, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ಪಿ.ವಿವೇಕಾನಂದ, ತಹಶೀಲ್ದಾರ ಎಂ.ಶೃತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ನಾನಾ ಕ್ಷೇತ್ರದ ಸಾಧಕರಿಗೆ ಸನ್ಮಾನ : ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ವಿಜಯನಗರ ಜಿಲ್ಲೆಯಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಟಿಪ್ಪುಸಾಬ್ (ಆರೋಗ್ಯ), ವಿ.ಮಲ್ಲೇಶಪ್ಪ (ಜಾನಪದ), ಎ.ಬಸರಾಜ (ಹವ್ಯಾಸಿ ರಂಗಭೂಮಿ), ಪಿ.ಸಿ.ಶಾಂತ (ವಿಕಲಚೇತನ), ಎಸ್.ಅಂಜು (ನೃತ್ಯ), ಆರ್.ಬಿ ನಿಂಗಪ್ಪ (ರಂಗಭೂಮಿ), ಕೊಟ್ರೇಶ್ ತಳವಾರ್ (ಚಿತ್ರಕಲೆ ಮತ್ತು ಶಿಲ್ಪಕಲೆ), ಹೆಚ್.ಜೆ.ಪದ್ಮಣ್ಣ (ಶಿಕ್ಷಣ), ಗುಂಡಿ ರಮೇಶ್ (ಸಮಾಜ ಸೇವೆ), ಎನ್.ಎಂ.ರವಿಕುಮಾರ್ (ಸಾಹಿತ್ಯ), ಮಧುಸುದನ್ ಹವಾಲ್ದಾರ್, ಜಿ.ಚಿನ್ನಪ್ಪ, ನೀಲಪ್ಪ, ವಿ.ಅನುರಾಧ (ಸಂಗೀತ), ವಿಜಯವಾಣಿ (ಕ್ರೀಡಾ) ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್