
ಕೋಲಾರ, 0೧ ನವಂಬರ್(ಹಿ.ಸ.) :
ಆ್ಯಂಕರ್ : ಕೋಲಾರವನ್ನು ರಾಜಧಾನಿಯನ್ನಾಗಿಸಿಕೊಂಡಿದ್ದ ಗಂಗರು ಕನ್ನಡದಲ್ಲಿ ಆಡಳಿತ ಮಾಡಿರುವುದು ಕನ್ನಡ ಆಡಳಿತ ಭಾಷೆಯಾಗಲು ನಾಂದಿಯಾಯಿತು ಇದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ಹೇಳಿದರು.
ಕೋಲಾರ ನಗರದ ಹಳೇ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಭಾರತ ಸೇವಾದಳ, ಹಳೇ ಮಾಧ್ಯಮಿಕ ಶಾಲೆ ಹಾಗೂ ಉರ್ದು ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾ ರೋಹಣೆ ನೆರವೇರಿಸಿ ಮಾತನಾಡುತ್ತಿದ್ದರು.
ಕನ್ನಡ ಕೇವಲ ಮಾತೃಭಾಷೆಯಾಗಿ ಮಾತ್ರವಲ್ಲದೆ ಪ್ರಾಕೃತಿಕವಾಗಿ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿಯೂ ಕನ್ನಡ ಭಾಷೆಯೇ ಪ್ರಧಾನವಾಗಿರಬೇಕು ಎಂದು ಹೇಳಿದ ಅವರು, ಕನ್ನಡ ಭಾಷೆಯ ಇತಿಹಾಸ ಹಿರಿಮೆ ಗರಿಮೆಗಳಿಂದ ಕೂಡಿದ್ದು, ಯಾವುದೇ ಹಿಂಜರಿಕೆ ಮತ್ತು ಕೀಳರಿಮೆ ಇಲ್ಲದೆ ಕನ್ನಡವನ್ನು ಬಳಸಬೇಕು ಎಂದು ಹೇಳಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ರಾಷ್ಟ್ರಧ್ವಜಾರೋಹಣೆ ನೆರವೇರಿಸಿ ಮಾತನಾಡಿ, ಸುಮಾರು ೨೫೦೦ ವರ್ಷಗಳ ಇತಿಹಾಸವಿರುವ ಕನ್ನಡವು ಕಲ್ಲಿನ ಮೇಲಿನ ಕೆತ್ತನೆಗಳಿಂದ ಆರಂಭಿಸಿ ತಾಳೇಗರಿಯಿಂದ ಮುಂದುವರೆದು ಇದೀಗ ಎಐ ತಂತ್ರeನದವರೆವಿಗೂ ಅಳವಡಿಕೆಯಾಗಿದೆ, ಕನ್ನಡ ಭಾಷೆಯು ಅಂಕಿ ಸಂಖ್ಯೆಗಳುಳ್ಳ ಸರ್ವಾಂಗೀಣ ಭಾಷೆಯಾಗಿದ್ದು, ಇದು ದ್ರಾವಿಡ ಭಾಷೆಗಳಲ್ಲಿ ವೈಶಿಷ್ಟ್ಯಪೂರ್ಣವಾಗಿದೆ ಎಂದರು.
ಕನ್ನಡ ಭಾಷೆಯು ಇಂದಿಗೂ ಜನಮಾನಸದಲ್ಲಿ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರಲು ಸರಕಾರಿ ಕನ್ನಡ ಶಾಲೆಗಳೇ ಕಾರಣವಾಗಿದ್ದು, ಇದಕ್ಕಾಗಿ ಶ್ರಮಿಸುತ್ತಿರುವ ಸರಕಾರಿ ಶಾಲಾ ಶಿಕ್ಷಕರು ನಿತ್ಯ ಅಭಿನಂದನಾರ್ಹರು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಎರಡು ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ರೋಟರಿ ಸೆಂಟ್ರಲ್ ಅಧ್ಯಕ್ಷ ಸೈನ್ಸ್ ನಾಗರಾಜ್, ಸೇವಾದಳ ಪದಾಕಾರಿಗಳಾದ ಬಹಾದ್ದೂರ್ ಸಾಬ್, ಕೆ.ಜಯದೇವ್, ಗೋಕುಲ ಚಲಪತಿ, ಮುನಿವೆಂಕಟ ಯಾದವ್, ಅಪ್ಪಿ ನಾರಾಯಣಸ್ವಾಮಿ, ಶ್ರೀನಾಧ್, ಶಿಕ್ಷಣ ಇಲಾಖೆಯ ಅಕಾರಿ ಷಫೀವುಲ್ಲಾ ಹಾಜರಿದ್ದರು. ಭಾರತ ಸೇವಾದಳ ಜಿಲ್ಲಾ ಸಂಘಟಕ ಬಿ.ದಾನೇಶ್ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ : ಕೋಲಾರ ನಗರದ ಹಳೇ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಭಾರತ ಸೇವಾದಳದಿಂದ ೭೦ ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್