
ಕೋಲಾರ, 0೧ ನವಂಬರ್(ಹಿ.ಸ.) :
ಆ್ಯಂಕರ್ : ಕನ್ನಡ ನಾಡು, ನುಡಿಗಾಗಿ ಹೋರಾಟ ಮಾಡಿದ ಮಹನೀಯರನ್ನು ರಾಜ್ಯೋತ್ಸವದಂದು ಸ್ಮರಿಸುವ ಮೂಲಕ ಗೌರವಿಸುವ ಕೆಲಸ ಆಗಬೇಕೆಂದು ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯಿಂದ ಗೌರಿಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಏಕೀಕರಣದ ಸಂದರ್ಭದಲ್ಲಿ ಗಡಿನಾಡು ಕೋಲಾರದಲ್ಲಿ ತಮಿಳು ಮತ್ತು ತೆಲುಗು ಪ್ರಭಾವದಿಂದಾಗಿ ಕನ್ನಡ ಬಳಕೆಗೆ ಹಿನ್ನಡೆ ಆಗಿತ್ತಾದರೂ ನಂತರದಲ್ಲಿ ಕರವೇ ಸೇರಿದಂತೆ ಕನ್ನಡ ಪರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಇದೀಗ ಮಾತೃಭಾಷಾ ಬಳಕೆ ಸಮಾಧಾನಕರವಾಗಿದೆ ಎಂದರು. ಜಾಗತಿಕ ಮಟ್ಟದಲ್ಲಿ ಕನ್ನಡ ಹಬ್ಬ ಆಚರಣೆ ಆಗುತ್ತಿರುವ ಇಂದಿನ ಸಂದರ್ಭದಲ್ಲಿ ಕನ್ನಡ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಶ್ರೀನಾಥ್ ನುಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಕನ್ನಡಿಗರ ಮೇಲೆ ಪರ ಭಾಷಿಗರ ದಬ್ಬಾಳಿಕೆ ನಡೆಯುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಕರವೇ ಹೋರಾಟಗಳು ಹೆಚ್ಚು ಪ್ರಸ್ತುತ ಆಗಿದ್ದು ಸ್ಥಳೀಯರಿಗೆ ಉದ್ಯೋಗಕ್ಕಾಗಿ ನಡೆಯುವ ಕರವೇ ಹೋರಾಟಕ್ಕೆ ತಾವೂ ಸಹಾ ಕೈ ಜೋಡಿಸುವುದಾಗಿ ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ, ಸರ್ಕಾರ ೧೭೦ ಕೋಟಿ ರೂ. ವೆಚ್ಚದಲ್ಲಿ ನರಸಾಪುರ ಭಾಗದಲ್ಲಿ ಖಾಸಗಿ ಕಾರ್ಖಾನೆ ಉದ್ಯೋಗಿಗಳಿಗೆ ವಸತಿ ಸೌಕರ್ಯ ನಿರ್ಮಾಣ ಮಾಡಿದರೆ ಸ್ಥಳೀಯವಾಗಿ ಮನೆ ನಿರ್ಮಾಣ ಮಾಡಿ ಬಾಡಿಗೆ ನೀಡಿರುವ ಮಾಲೀಕರಿಗೆ ಅನ್ಯಾಯ ಆಗುತ್ತದೆ. ಹೀಗಾಗಿ ಈ ಸಂಬಂಧ ಶಾಸಕರಿಗೆ ಮನವರಿಕೆ ಮಾಡಿಕೊಟ್ಟು ಸ್ಥಳೀಯ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿಶಿವಪ್ಪ ಮಾತನಾಡಿ, ಬ್ಯಾಂಕ್ ಅಧಿಕಾರಿ ಗಳು ಮತ್ತು ಸಿಬ್ಬಂದಿ ಗ್ರಾಹಕರ ಬಳಿ ತೆಲುಗು, ತಮಿಳು,ಹಿಂದಿ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದ್ದು ಈ ಸಂಬಂಧ ನಡೆಯುವ ಕನ್ನಡಪರ ಚಳವಳಿಗೆ ರೈತ ಸಂಘ ಸಹಾ ಕೈ ಬಲಪಡಿಸಲಿದೆ ಎಂದು ಪ್ರಕಟಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್, ಲಿಟಲ್ ಫಿಂರ್ಸ್ ನಿರ್ದೇಶಕ ಪ್ರಬೀನ್ ಅಗರ್ವಾಲ್ ರಾಜ್ಯೋತ್ಸವ ಶುಭಾಶಯ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ಮಾತನಾಡಿ, ಸ್ಥಳೀಯರಿಗೆ ಉದ್ಯೋಗಾವಕಾಶ ಕ್ಕಾಗಿ ಆಗ್ರಹಿಸಿ ೨೦೧೩ರಲ್ಲಿ ಖಾಸಗಿ ಕಂಪನಿ ವಿರುದ್ಧ ನಡೆದ ಕರವೇ ಹೋರಾಟದ ಮಾದರಿಯಲ್ಲಿ ಇದೀಗ ಟಾಟಾ ಕಂಪನಿ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಸಾರಥ್ಯದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು ದಿನಾಂಕವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು. ಕೋಲಾರದ ಮಿನಿ ಕ್ರೀಡಾಂಗಣಕ್ಕೆ ಮಹಾರಾಷ್ಟ್ರದ ಕ್ರೀಡಾಪಟು ಅಹಲ್ಯಾಬಾಯಿ ಹೋಳ್ಕರ ಅವರ ಹೆಸರನ್ನು ಇಡಲು ನಗರಸಭೆಯಿಂದ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಕನ್ನಡ ವಿರೋಧಿ ನೀತಿಯಾಗಿದೆ. ಕ್ರೀಡಾಂಗಣಕ್ಕೆ ಸಿ.ಬೈರೇಗೌಡ, ಡಿ.ವಿ.ಗುಂಡಪ್ಪ, ಮಾಸ್ತಿ, ಡಾ.ರಾಜಕುಮಾರ್, ಪುನೀತ್ ಕುಮಾರ್, ಮಾಜಿ ಐಎಎಸ್ ಅಧಿಕಾರಿ ಮುನಿಸ್ವಾಮಿ, ಕೋಲಾರ ನಿರ್ಮಾತೃ ಚನ್ನಯ್ಯ, ಸಿಎಂ ಸಿದ್ದರಾಮಯ್ಯ ಹೆಸರಿಡಬಹುದಾಗಿದೆ. ಇದೆಲ್ಲವನ್ನೂ ಬಿಟ್ಟು ಅಹಲ್ಯಾಬಾಯಿ ಹೋಳ್ಕರ ಹೆಸರನ್ನು ಅಂತಿಮಗೊಳಿಸಿದರೆ ಉಗ್ರ ಹೋರಾಟ ಮಾಡುವ ಜತೆಗೆ ನಾಮಫಲಕಕ್ಕೆ ಮಸಿ ಬಳಿಯಲಾಗುವುದು ಎಂದು ರಾಘವೇಂದ್ರ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮುಖಂಡ ಅಗರ್ವಾಲ್, ಕರವೇ ಜಿಲ್ಲಾ ಗೌರವಾಧ್ಯಕ್ಷ ನಾಗನಾಳ ಡಾ.ಮುನಿರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಮುನಿರಾಜು, ತಾಲೂಕು ಅಧ್ಯಕ್ಷ ಶಶಿಕುಮಾರ್, ಜಿಲ್ಲಾ ಕಾರ್ಯದರ್ಶಿ ಶೇಖರ್, ನವೀನ್, ಮಂಜುನಾಥ್, ಲೋಕೇಶ್, ಮುರಳಿ, ರೈತ ಘಟಕದ ಮಂಜುನಾಥ್, ಶಂಕರ್ರೆಡ್ಡಿ ಇದ್ದರು.
ಚಿತ್ರ : ಕರ್ನಾಟಕ ರಕ್ಷಣಾ ವೇದಿಕೆಯಿಂದ ಕೋಲಾರ ಗೌರಿಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ನೆರವೇರಿಸಿದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್