ಅಭಿವೃದ್ಧಿ ಕಾಮಗಾರಿಗಳಲ್ಲಿ ಗದಗ ಜಿಲ್ಲೆ ಮುಂಚೂಣಿ: ಸಚಿವ ಎಚ್.ಕೆ.ಪಾಟೀಲ
ಗದಗ, 1 ನವೆಂಬರ್ (ಹಿ.ಸ.): ಆ್ಯಂಕರ್: ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ -೩ ಯೋಜನೆ ಪೂರ್ಣಗೊಳಿಸಿ, ೧೩-೧೪ ಲಕ್ಷ ಎಕರೆ ಭೂಮಿಯನ್ನು ನೀರಾವರಿಗೊಳಿಸಿ ರೈತರ ಬದುಕನ್ನು ಹಸನಾಗಿಸುಲು ರಾಜ್ಯ ಸರ್ಕಾರ ಸಂಕಲ್ಪವನ್ನು ಮಾಡಿದೆ ಎಂದು ರಾಜ್ಯದ ಕಾನೂನು, ನ್ಯಾಯ , ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳ
ಫೋಟೋ


ಗದಗ, 1 ನವೆಂಬರ್ (ಹಿ.ಸ.):

ಆ್ಯಂಕರ್:

ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ -೩ ಯೋಜನೆ ಪೂರ್ಣಗೊಳಿಸಿ, ೧೩-೧೪ ಲಕ್ಷ ಎಕರೆ ಭೂಮಿಯನ್ನು ನೀರಾವರಿಗೊಳಿಸಿ ರೈತರ ಬದುಕನ್ನು ಹಸನಾಗಿಸುಲು ರಾಜ್ಯ ಸರ್ಕಾರ ಸಂಕಲ್ಪವನ್ನು ಮಾಡಿದೆ ಎಂದು ರಾಜ್ಯದ ಕಾನೂನು, ನ್ಯಾಯ , ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಡಾ.ಎಚ್.ಕೆ.ಪಾಟೀಲ ಹೇಳಿದರು.

ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಜರುಗಿದ ೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ ೧ ಲಕ್ಷದ ೩೦ ಸಾವಿರ ಎಕರೆ ಭೂಮಿಯನ್ನು ರೈತರಿಂದ ಒಡಂಬಡಿಕೆ ಮೂಲಕ ಒಂದು ಎಕರೆ ನೀರಾವರಿ ಭೂಮಿಗೆ ೪೦ ಲಕ್ಷ ರೂಪಾಯಿ ಬೆಲೆ ನೀಡಲು ಸರಕಾರ ನಿರ್ಣಯಗೊಳಿಸಿದೆ ಎಂದರು.

ಕನ್ನಡ ನಾಡಿನಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನದ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಸರಾಸರಿ ೫೦೦೦ ರೂಪಾಯಿಗಳ ಆದಾಯ ಹೆಚ್ಚಿಸಿ ನಾಡಿನ ಬಡತನವನ್ನು ಬೇರು ಸಹಿತ ಕಿತ್ತೊಗೆದಿದ್ದೇವೆ.ಕ್ರಾಂತಿಕಾರವಾದ ಈ ಯೋಜನೆಗಳು ನಮ್ಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಯಾಗಿ ನೂರಕ್ಕೆ ೯೯.೫೦ ರಷ್ಟು ಜನರಿಗೆ ಈ ಯೋಜನೆಗಳು ಜಿಲ್ಲೆಯಲ್ಲಿನ ಅರ್ಹರಿಗೆ ತಲುಪಿವೆ ಎಂದರು.

ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ ಹಾಗೂ ಕನ್ನಡ ಸಾಹಿತ್ಯ ಪೋಷಕಿಯಾಗಿದ್ದ ದಾನಚಿಂತಾಮಣಿ ಅತ್ತಿಮಬ್ಬೆಯವರ ಸ್ಥಳವಾದ ಗದಗ ಜಿಲ್ಲೆ ಲಕ್ಕುಂಡಿ ಗ್ರಾಮವು ಐತಿಹಾಸಿಕ ಪಾರಂಪರಿಕ ಪ್ರದೇಶವಾಗಿದ್ದು, ಗ್ರಾಮದಲ್ಲಿರುವ ಸ್ಮಾರಕಗಳು, ದೇವಾಲಯಗಳು, ಬಾವಿಗಳು, ಶಾಸನಗಳ ಸಂರಕ್ಷಣೆಗಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಈ ಪ್ರಾಧಿಕಾರದ ಮುಖಾಂತರ ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.

ಜಿಲ್ಲೆಯ ಲಕ್ಕುಂಡಿ ಮತ್ತು ಇತರೇ ಸ್ಥಳಗಳಲ್ಲಿರುವ ಕಲ್ಯಾಣ ಚಾಲುಕ್ಯರ ಸ್ಮಾರಕ ಸಮೂಹವನ್ನು ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಗೆ ನಾಮ ನಿರ್ದೇಶನ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದು, ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಶಿಕ್ಷಕರ ಹಾಜರಾತಿಯನ್ನು ಆನ್‌ಲೈನ್ ಮೂಲಕ ನಿರ್ವಹಿಸಲು “ಪ್ರತ್ಯಕ್ಷ” ತಂತ್ರಾಂಶವನ್ನು ರಾಜ್ಯದಲ್ಲಿ ಚಾಲನೆ ನೀಡಿದ ಮೊದಲ ಜಿಲ್ಲೆ ಗದಗ ಆಗಿದೆ. ಜಿಲ್ಲೆಗೆ ಹೊಸದಾಗಿ ೧೦ ಕೆ.ಪಿ.ಎಸ್. ಹಾಗೂ ೯೦ ದ್ವಿಭಾಷಾ ಶಾಲೆಗಳು ಮಂಜೂರಾಗಿರುತ್ತವೆ. ಶಿಕ್ಷಣ ಇಲಾಖೆಯ ಕಚೇರಿಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಆಧುನಿಕತೆ ತರಲು ಇ-ಆಫೀಸ್ ತಂತ್ರಾಂಶದ ಮೂಲಕ ಕಡತಗಳ ನಿರ್ವಹಣೆ ಮಾಡಲಾಗುತ್ತಿದ್ದು, ರಾಜ್ಯದಲ್ಲಿಯೇ ಶಿಕ್ಷಣ ಇಲಾಖೆಯಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅಳವಡಿಸಿಕೊಂಡ ಮೊದಲ ಜಿಲ್ಲೆಯಾಗಿದೆ ಎಂದು ಹೇಳಿದರು.

ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯ ಬಡವರು ಹಾಗೂ ಬಡಮಕ್ಕಳಿಗೂ ಅತ್ಯುತ್ತಮ ಸೌಲಭ್ಯ ನೀಡುವ ಗುರಿಯನ್ನು ಹೊಂದಿ ಇಂದಿರಾ ವನ ನಿರ್ಮಾಣ ಮಾಡಿ ಅದರಲ್ಲಿ ಸುಂದರವಾದ ಉದ್ಯಾನವನ, ಮಕ್ಕಳ ಮನೋರಂಜನೆಗಾಗಿ ಕ್ರೀಡಾ ಉಪಕರಣಗಳನ್ನು ಅಳವಡಿಸಿ ವಯೋವೃದ್ಧರಿಗೂ ವಿಶ್ರಾಂತಿಗಾಗಿ ಸ್ಥಳಾವಕಾಶ ಕಲ್ಪಿಸಿದ್ದು, ಅತ್ಯುತ್ತಮ ಸೌಲಭ್ಯ ಕಲ್ಪಿಸಿದ್ದನ್ನು ಮುಖ್ಯಮಂತ್ರಿಗಳು ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ನ್ಯಾಯಗಂಟೆ ಕಲ್ಪನೆ ಬಹುಕಾಲದಿಂದ ಇದ್ದದ್ದು. ಅದೇ ಮಾದರಿಯಲ್ಲಿ ಪ್ರಭುವಿನೆಡೆಗೆ ಪ್ರಭುತ್ವ ಎಂಬ ಯೋಜನೆಯ ವಿನೂತನ ಪ್ರಯೋಗವನ್ನು ಜಿಲ್ಲಾಡಳಿತ ವತಿಯಿಂದ ಪ್ರಾರಂಭಿಸಲಾಗಿದೆ. ಈ ಪ್ರಯೋಗ ನಾಗರಿಕರು ತಮ್ಮ ದೂರನ್ನು ಆಡಳಿತಕ್ಕೆ ಕ್ಷಣಾರ್ದದಲ್ಲಿಯೇ ತಲುಪಿಸುವ ಹಾಗೂ ನೀಡಿದ ದೂರು ಸಂಬಂಧಿಸಿದವರಿಗೆ ತ್ವರಿತವಾಗಿ ತಲುಪಿ ಪರಿಹಾರಕ್ಕೆ ದಾರಿ ಮಾಡುವ ಆಡಳಿತ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೂ ಕಾರಣವಾಗಲಿರುವ ಈ ಪ್ರಯೋಗ ರಾಷ್ಟ್ರದಲ್ಲಿಯೇ ಪ್ರಥಮವಾಗಿದೆ ಹಾಗು ಥರ್ಡ್-ಐ ಪ್ರಾರಂಭವಾದಾಗಿನಿಂದ ಸುಲಿಗೆ, ಕಳ್ಳತನ, ಮನೆಗಳ್ಳತನ, ಗಲಭೆ, ರಸ್ತೆ ಅಪಘಾತಗಳು ಮುಂತಾದ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಮೊದಲಿಗಿಂತ ಅಧಿಕವಾಗಿ ಹಾಗೂ ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ ಥರ್ಡ-ಐ ನ ಅನುಷ್ಠಾನದಿಂದ ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಬಿಂಕದಕಟ್ಟೆಯಲ್ಲಿ ೪೦ ಎಕರೆ ವಿಶಾಲ ಪ್ರದೇಶದಲ್ಲಿ ಮೃಗಾಲಯವನ್ನು ಆರಂಭಿಸಿ ಮತ್ತೆ ೧೩ ಎಕರೆ ಪ್ರದೇಶ ಪಡೆದು ಅಂದಾಜು ೧೨ ಕೋಟಿ ರೂ.ಗಳ ವೆಚ್ಚದಲ್ಲಿ ಮೃಗಾಲಯವನ್ನು ವಿಸ್ತರಿಸಿ ಅಭಿವೃದ್ಧಿಗೊಳಿಸಲಾಗುತ್ತಿದೆ.ಹಾಗು ನರಗುಂದ ಪಟ್ಟಣದಲ್ಲಿ ೧ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ, ರೋಣ ಪಟ್ಟಣದಲ್ಲಿ ೧ ಹೊಸ ಮೌಲಾನಾ ಆಜಾದ ಮಾದರಿ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಗದಗ ಮತಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ ಇಲಾಖೆ ಸೇರಿ ಒಟ್ಟಾರೆ ೪೫ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ ಇಲಾಖೆ ಸೇರಿ ಒಟ್ಟಾರೆ ೫೦ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.ಗದಗ ಬೆಟಗೇರಿ ವ್ಯಾಪಾರ ಸಂಸ್ಕೃತಿ ಮತ್ತು ಪ್ರದರ್ಶನ ಪ್ರಾಧಿಕಾರವನ್ನು ೦೩-೦೬-೨೦೨೫ ರಂದು ಉದ್ಘಾಟಿಸುವ ಮೂಲಕ ಪ್ರಾಧಿಕಾರದ ಅಭಿವೃದ್ಧಿ ಪರಿಕಲ್ಪನೆ ಅನಾವರಣವನ್ನು ಮಾಡಲಾಗಿದೆ.

ಗದಗ ಹೃದಯ ಭಾಗದಲ್ಲಿರುವ ೩೪ ಎಕರೆ ೩೨ ಗುಂಟೆ ಪ್ರದೇಶವನ್ನು ಜನೋಪಯೋಗಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು

ಬಿಂಕದಕಟ್ಟೆ ಝೂದ ಬಳಿ ಅರಣ್ಯ ಇಲಾಖೆ ನೇತೃತ್ವದಲ್ಲಿ “ಆರ್ಚರಿ” ಅಂಕಣ (ಬಿಲ್ಲು ಬಾಣ ಕ್ರೀಡೆ) ಹಾಗೂ ಪಿಕಲ್ ಬಾಲ್ ಆಟಗಳ ಸೌಲಭ್ಯವನ್ನು ಸೃಷ್ಠಿಸಲಾಗಿದ್ದು, ಇದೇ ೩ನೇ ತಾರೀಖಿನಂದು ಪ್ರಾರಂಭಿಸಲಾಗುವುದು.ಇದು ನಮ್ಮ ರಾಜ್ಯವು ಶಿಕ್ಷಣದಲ್ಲಿ, ತಂತ್ರಜ್ಞಾನದಲ್ಲಿ, ಕೃಷಿಯಲ್ಲಿ, ಉದ್ಯಮದಲ್ಲಿ, ಕಲಾ-ಸಂಸ್ಕೃತಿಯಲ್ಲಿ ಮುಂಚೂಣಿಯಲ್ಲಿದೆ.

ಈ ಪ್ರಗತಿಯ ಜೊತೆಗೆ ನಮ್ಮ ಕನ್ನಡ ಭಾಷೆ ಸಮೃದ್ಧವಾಗಿದೆಯೆಂದು ನಾವು ಕೈಕಟ್ಟಿ ಕುಳಿತುಕೊಳ್ಳಬಾರದು. ಏಕೆಂದರೆ ಇಂಗ್ಲಿಷ್ ಸೇರಿದಂತೆ ಕೆಲವು ಭಾಷೆಗಳ ಅತಿಯಾದ ದಾಳಿ ಕನ್ನಡದ ಮೇಲಾಗುತ್ತಿದೆ. ಅಷ್ಟೇ ಅಲ್ಲದೇ ಇಂದಿನ ಆಧುನಿಕ ಶಿಕ್ಷಣ ಕ್ರಮದಿಂದ ಕನ್ನಡ ಕಲಿಕೆಯ ಬಗ್ಗೆ ಯುವ ಜನತೆಯಲ್ಲಿ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಲು ನಾವು, ಪಾಲಕರು ಮತ್ತು ಶಿಕ್ಷಕರು ಒಟ್ಟಾಗಿ ಪ್ರಯತ್ನಿಸಬೇಕು. ಕನ್ನಡವನ್ನು ಕಾಪಾಡುವುದು, ಬೆಳೆಸುವುದು ನಮ್ಮ ಪ್ರತಿಯೊಬ್ಬರ ಕರ್ತವ್ಯ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ,ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ,ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಎಸಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande