ಚಂಡೀಗಡ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪಂಜಾಬ್ ಪೊಲೀಸರು ಹಬ್ಬದ ದಿನಗಳಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸುವ ಯತ್ನವನ್ನು ವಿಫಲಗೊಳಿಸಿ, ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಬಬ್ಬರ್ ಖಾಲ್ಸಾ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಅವರಿಂದ ಸುಮಾರು 2.5 ಕಿಲೋಗ್ರಾಂ ಆರ್‌ಡಿಎಕ್ಸ್ ವಶಪಡಿಸಿಕೊಳ್ಳಲಾಗಿದೆ.
ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರು ಗುರುವಾರ ಮಾಹಿತಿ ನೀಡಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಯ ಬೆಂಬಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಸಂಘಟನೆಯ ಒಂದು ಗುಪ್ತ ಮಾಡ್ಯೂಲ್ ಅನ್ನು ಪೊಲೀಸರು ಭೇದಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಗುರ್ಜಿಂದರ್ ಸಿಂಗ್ ಮತ್ತು ದಿವಾನ್ ಸಿಂಗ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಈ ಜಾಲವನ್ನು ಬ್ರಿಟನ್ ಮೂಲದ ನಿಶಾನ್ ಮತ್ತು ಆದೇಶ್ ಎಂಬ ನಿರ್ವಾಹಕರು ನಿಯಂತ್ರಿಸುತ್ತಿದ್ದು, ಅವರು ಬಿಕೆಐ ಮಾಸ್ಟರ್ ಮೈಂಡ್ ಹರ್ವಿಂದರ್ ಸಿಂಗ್ ರಿಂಡಾ ಅವರಿಂದ ನೇರ ಸೂಚನೆಗಳನ್ನು ಪಡೆಯುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಡಿಜಿಪಿ ಯಾದವ್ ತಿಳಿಸಿದ್ದಾರೆ.
ಬಂಧಿತರಿಂದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ಪ್ರಾರಂಭಿಸಲಾಗಿದೆ. ಈ ಆರ್‌ಡಿಎಕ್ಸ್ ಪಾಕಿಸ್ತಾನದಿಂದ ಕಳುಹಿಸಲ್ಪಟ್ಟಿದ್ದು, ಪಂಜಾಬ್‌ನಲ್ಲಿ ಪ್ರಮುಖ ಭಯೋತ್ಪಾದಕ ದಾಳಿ ನಡೆಸಲು ಉದ್ದೇಶಿಸಲಾಗಿತ್ತು ಎಂಬುದು ಬಹಿರಂಗವಾಗಿದೆ. ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa