ಇಂದೋರ್, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದ ಇಂದೋರ್ ಜಿಲ್ಲೆಯ ಮ್ಹೌ ಸಮೀಪ ಇಂದೋರ್–ಖಲ್ಘಾಟ್ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ದುರ್ಮರಣ ಹೊಂದಿದ್ದಾರೆ.
ನಾಂದೇಡ್ ಸೇತುವೆ ಬಳಿಯಲ್ಲಿ ಓಮ್ನಿ ವ್ಯಾನ್ ಮತ್ತು ಸ್ವಿಫ್ಟ್ ಡಿಸೈರ್ ಕಾರು ಪರಸ್ಪರ ಡಿಕ್ಕಿಯಾಗಿ ಒಂದು ಕಾರು ಬೆಂಕಿಗೆ ಆಹುತಿಯಾದ ಪರಿಣಾಮ ಇಬ್ಬರು ಜೀವಂತವಾಗಿ ಸುಟ್ಟುಹೋಗಿದ್ದಾರೆ.
ಅಪಘಾತದಲ್ಲಿ ಮೂವರು ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಓಮ್ನಿ ವ್ಯಾನ್ ಧಮ್ನೋಡ್‌ನಿಂದ ಮನ್ಪುರದತ್ತ ತೆರಳುತ್ತಿದ್ದು, ಸ್ವಿಫ್ಟ್ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿತ್ತು. ಇದ್ದಕ್ಕಿದ್ದಂತೆ ಸ್ವಿಫ್ಟ್ ಕಾರು ವಿಭಜಕವನ್ನು ದಾಟಿ ಎದುರು ಬರುತ್ತಿದ್ದ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಆಘಾತದಿಂದ ಓಮ್ನಿ ವ್ಯಾನ್ ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಜೀವ ದಹನಗೊಂಡರೆ, ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬರ್ಗೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ತನಿಖೆ ಮುಂದುವರೆದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa