ಭೋಪಾಲ್, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದಲ್ಲಿ ವಿಷಕಾರಿ ಕಫ್‌ಸಿರಪ್‌ನಿಂದ ಮಕ್ಕಳ ಸಾವಿನ ಸರಣಿ ಮುಂದುವರಿಯುತ್ತಿದ್ದು, ಬುಧವಾರ ರಾತ್ರಿ ಮತ್ತೊಂದು ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಒಟ್ಟು ಮೃತರ ಸಂಖ್ಯೆ 22ಕ್ಕೆ ಏರಿದೆ.
ಚಿಂದ್ವಾರದ ಉಮ್ರೆತ್ ತಹಸಿಲ್‌ನ ಪಚ್‌ಧರ್ ಗ್ರಾಮದ ಮೂವರು ವರ್ಷದ ಮಾಯಾಂಕ್ ಸೂರ್ಯವಂಶಿ ನಾಗ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾನೆ. ಮೃತ ಮಕ್ಕಳಲ್ಲಿ 19 ಮಂದಿ ಚಿಂದ್ವಾರದವರು, ಇಬ್ಬರು ಬೇತುಲ್ ಜಿಲ್ಲೆಯವರು ಮತ್ತು ಒಬ್ಬ ಪಂಧುರ್ನಾದವರು. ಎಲ್ಲರೂ 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು.
ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಡ್ರಿಫ್ ಕಫ್‌ಸಿರಪ್ ತಯಾರಿಕಾ ಕಂಪನಿ ಶ್ರೀಸನ್ ಫಾರ್ಮಾನ ನಿರ್ದೇಶಕ ಗೋವಿಂದನ್ ರಂಗನಾಥನ್ ಅವರನ್ನು ಚೆನ್ನೈಯಲ್ಲಿ ಬಂಧಿಸಲಾಗಿದೆ ಎಂದು ಚಿಂದ್ವಾರ ಪೊಲೀಸ್ ವರಿಷ್ಠಾಧಿಕಾರಿ ದೃಢಪಡಿಸಿದ್ದಾರೆ. ಮಧ್ಯಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ ಬುಧವಾರ ರಾತ್ರಿ ಚೆನ್ನೈ ಮತ್ತು ಕಾಂಚೀಪುರಂನಲ್ಲಿ ದಾಳಿ ನಡೆಸಿ ಪ್ರಮುಖ ದಾಖಲೆಗಳು, ಔಷಧ ಮಾದರಿಗಳು ಮತ್ತು ಉತ್ಪಾದನಾ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಬಂಧಿತ ರಂಗನಾಥನ್ ಅವರನ್ನು ಇಂದು ಚೆನ್ನೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಟ್ರಾನ್ಸಿಟ್ ರಿಮಾಂಡ್ ಪಡೆದ ನಂತರ ಚಿಂದ್ವಾರಕ್ಕೆ ಕರೆತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa