ಹಂಪಿ, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಾಲ್ಮೀಕಿ ರಾಮಾಯಣದ ಆದರ್ಶಗಳು ಭೂಮಿ ಇರುವರೆಗೂ ಇರುತ್ತವೆ. ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕರು ಹಾಗೂ ಅಧ್ಯನಾಂಗದ ನಿರ್ದೇಶಕರಾದ ಡಾ. ಅಮರೇಶ್ ಯತಗಲ್ ಅವರು ಹೇಳಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಆಡಳಿತ ಕಚೇರಿಯ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡುತ್ತಾ ಜಗತ್ತಿನಲ್ಲಿ ಅನೇಕ ಕಾವ್ಯಗಳಿದ್ದು, ಪ್ರಸ್ತುತ ದಿನಗಳಲ್ಲಿ ವಾಲ್ಮೀಕಿ ರಾಮಾಯಣವು ಶಾಶ್ವತವಾಗಿದೆ. ವಾಲ್ಮೀಕಿ ಕೇವಲ ಮಹರ್ಷಿಯಲ್ಲ ಅವರು ವಿದ್ವಾಂಸರು ಆಗಿದ್ದು, ರಾಮರಾಜ್ಯ, ರಾಜ್ಯಭಾರ, ಬದುಕಿನ ಆದರ್ಶಗಳನ್ನು ತಮ್ಮ ಮಹಾಕಾವ್ಯದಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ ಅವರು ಪ್ರತಿವರ್ಷ ವಾಲ್ಮೀಕಿ ಜಯಂತಿಯನ್ನು ಮಾಡುವ ಉದ್ದೇಶವೇ ಕಳೆದು ಹೋದ ನೆನಪುಗಳನ್ನು ಪುನಃ ತರುವುದು ಹಾಗೂ ವಾಲ್ಮೀಕಿ ಅವರ ವಾಲ್ಮೀಕಿ ರಾಮಾಯಣದ ಆದರ್ಶಗಳನ್ನು ಅಧ್ಯಯನ ಮಾಡುವುದು, ಜೊತೆಗೆ ವಿಚಾರಗಳನ್ನು ಹಂಚಿಕೊಳ್ಳುವುದು. ಈ ಜಗತ್ತಿನ ಅನೇಕ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ರಾಮಾಯಣದಲ್ಲಿ ತಿಳಿಸಿದ್ದಾರೆ. ಇದರ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಂಡು ಸಕರಾತ್ಮಕವಾದಂತಹ ಫಲಿತದೊಂದಿಗೆ ಮುಂದಿನ ವರ್ಷ ಆಚರಿಸೋಣ ಎಂದರು.
ಈ ಕಾರ್ಯಕ್ರಮದಲ್ಲಿ ಉಪಕುಲಸಚಿವರಾದ ಬಿ. ಗುರುಬಸಪ್ಪ ಅವರು ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್