ಬೆಂಗಳೂರು, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಕಾರ್ಯಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಕೃ. ನರಹರಿ (93) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಬೆಳಗ್ಗೆ 4.30ರ ಸುಮಾರಿಗೆ ವಯೋಸಹಜ ಅಸೌಖ್ಯದಿಂದ ಅವರು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು.
ಪ್ರೊ. ನರಹರಿ ಅವರು ಹಲವು ದಶಕಗಳಿಂದ ಸಂಘ ಪರಿವಾರದ ವಿವಿಧ ಸಂಘಟನೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಆರ್‌ಎಸ್‌ಎಸ್‌ನ ಕ್ಷೇತ್ರೀಯ ಕಾರ್ಯವಾಹರಾಗಿ, ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ಹಾಗು ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ತುರ್ತು ಪರಿಸ್ಥಿತಿ ಅವಧಿಯಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳ ಪರ ಹೋರಾಟ ನಡೆಸಿ ಜೈಲುವಾಸವನ್ನೂ ಅನುಭವಿಸಿದ್ದರು.
ಮೃತರ ಪಾರ್ಥಿವ ಶರೀರವನ್ನು ಶ್ರೀರಾಂಪುರದ ಮನೆಗೆ ತರಲಾಗಿದೆ. ಇಂದು ಬುಧವಾರ ಅಕ್ಟೋಬರ್ 08, 2025 ಮಧ್ಯಾಹ್ನ 2.30ರ ವರೆಗೆ ಸ್ವಗೃಹದಲ್ಲೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಅಪರಾಹ್ನ 3.00 ಗಂಟೆಗೆ ಹರಿಶ್ಚಂದ್ರ ಘಾಟ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರೊ. ನರಹರಿ ಅವರ ನಿಧನಕ್ಕೆ ಸಂಘ ಪರಿವಾರದ ಮುಖಂಡರು, ಬಿಜೆಪಿ ನಾಯಕರೂ ಸೇರಿದಂತೆ ಅನೇಕರು ಆಳವಾದ ಶೋಕ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa