ಬಳ್ಳಾರಿ, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಹರ್ಷಿ ವಾಲ್ಮೀಕಿಯ ಚಿಂತನೆಗಳು ಮತ್ತು ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಅರ್ಥಪೂರ್ಣವಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರೊ.ವೆಂಕಟಗಿರಿ ದಳವಾಯಿ ಅವರು ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಪರಂಪರೆ ಕಾಪಾಡುವುದರಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ವ್ಯಕ್ತಿಯ ನಡತೆ ಮತ್ತು ಅವನ ಜೀವನವನ್ನು ನಡೆಸಲು ವಾಲ್ಮೀಕಿ ಅವರ ಚಿಂತನೆಗಳು ಮಾರ್ಗದರ್ಶಕವಾಗಿವೆ. ಆಧುನಿಕ ದಿನಗಳಲ್ಲಿ ಜಯಂತಿಗಳು ವರ್ತಮಾನಗಳ ಬಗ್ಗೆ ತಿಳಿಸುತ್ತದೆ ಎಂದರು.
ವಿಶ್ವವಿದ್ಯಾಲಯದ ಕುಲಸಚಿವ ಸಿ.ನಾಗರಾಜು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹನೀಯರ ಜಯಂತಿಗಳು ಜೀವನದ ಯಶೋಗಾಥೆಗಳನ್ನು ಪಸರಿಸುವುದು ಉದ್ದೇಶವಾಗಿದೆ. ರಾಮಾಯಣವನ್ನು ಮುಂದಿನ ಪೀಳಿಗೆಗೆ ಕೊಂಡಯ್ಯುವುದು ನಮ್ಮ ಕರ್ತವ್ಯವಾಗಿದೆ. ವಾಲ್ಮೀಕಿ ರಾಮಾಯಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ವಿ ವ್ಯಕ್ತಿಯಾಗಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಎಂ ಸಾಲಿ ಮಾತನಾಡಿ, ರಾಮಾಯಾಣದಲ್ಲಿ ಒಂದು ಪ್ರಮುಖವಾದ ಅಂಶವೆಂದರೆ ಜೀವನದ ಮೌಲ್ಯ. ಒಬ್ಬ ವ್ಯಕ್ತಿಯ ನಡತೆ, ಪ್ರಾಮಾಣಿಕತೆ, ಸತ್ಯ ಸೇರಿದ ಚಿತ್ರಣವೇ ರಾಮಾಯಾಣವಾಗಿದೆ ಎಂದು ಅಭಿಪ್ರಾಯ ಪಟ್ಟರು.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಜಯಲಕ್ಷ್ಮಿ ಅವರು ಮಾತನಾಡಿ, ಆಧುನಿಕ ಕಾಲದ ವಿದ್ಯಾರ್ಥಿಗಳು ಮಹನೀಯರ ಜೀವನದ ಬಗ್ಗೆ ತಿಳಿದುಕೊಳ್ಳಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಅಂದಿನ ಕಾಲದ ಗುರು-ಶಿಷ್ಯರ ಸಂಬಂಧ ಹಾಗೂ ಗುರುಕುಲ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ವೇಳೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಿವಕುಮಾರ, ಪ.ಜಾತಿ ಮತ್ತು ಪ.ಪಂಗಡಗಳ ವಿಶೇಷ ಘಟಕದ ಸಂಯೋಜಕ ಡಾ.ಕುಮಾರ, ವಿದ್ಯಾರ್ಥಿ ಕ್ಷೇಮಪಾಲನ ಘಟಕದ ನಿರ್ದೇಶಕರಾದ ಡಾ.ಗೌರಿ ಮಾಣಿಕ್ ಮಾನಸ ಸೇರಿದಂತೆ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್