

ರಾಯಚೂರು, 30 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಹೊಲಿಕೆಗೆ ಅಸಾಧ್ಯವೆನ್ನುವಂತೆ ಅಕ್ಟೋಬರ್ ಒಂದೇ ತಿಂಗಳಲ್ಲಿ ರಾಯಚೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 200 ಹೆರಿಗೆ ನಿರ್ವಹಣೆ ಮಾಡಲಾಗಿದೆ.
ಕರ್ನಾಟಕ ಸರಕಾರದ 'ನಿಮ್ಮ ಆರೋಗ್ಯ ನಮ್ಮ ಆಧ್ಯತೆ' ಧ್ಯೇಯ್ಯವಾಕ್ಯಕ್ಕೆ ಬದ್ಧಾವಾಗಿ ಕೆಲಸ ಮಾಡಿದ್ದರಿಂದ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಈ ಕಾರ್ಯಸಾಧನೆ ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಆಸ್ಪತ್ರೆಯು 2024ರ ಅಗಷ್ಟ 15 ರಂದು ರಾಯಚೂರ ನಗರದಲ್ಲಿ ಆರಂಭವಾಗಿ ವರ್ಷದೊಳಗೆ 1209 ಹೆರಿಗೆ ನಿರ್ವಹಿಸಿದ ಬೆನ್ನಲ್ಲೇ ಮತ್ತೊಂದು ಸಾಧನೆ ತೋರಿದೆ. ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ನಿರ್ವಹಣೆ, ಮಕ್ಕಳ ಆರೈಕೆ ಚಿಕಿತ್ಸೆಗೆ ನಿರಂತರವಾಗಿ ಸಹಕರಿಸುತ್ತಿರುವ ಆಡಳಿತ ವೈದ್ಯಾಧಿಕಾರಿ ರೆಡಿಯಾಲಜಿಸ್ಟ್ ಡಾ.ಪ್ರಜ್ವಲ್‌ಕುಮಾರ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ನಂದಿತಾ ಎಮ್ ಎನ್, ಆಸ್ಪತ್ರೆಯಲ್ಲಿನ ನಾಲ್ವರು ಪ್ರಸೂತಿ ತಜ್ಞರು, ಮೂವರು ಮಕ್ಕಳ ತಜ್ಞರು ಹಾಗೂ ನಗರದ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು, ಸ್ನಾತ್ತಕೋತ್ತರ ವೈದ್ಯ ವಿಧ್ಯಾರ್ಥಿಗಳ ಕಾರ್ಯ ಪ್ರಶಂಸನೀಯವಾಗಿದೆ.
ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರಬಾಬು, ಐಇಸಿ ಚಟುವಟಿಕೆಗೆ ಹೆಚ್ಚಿನ ಒತ್ತು ಕೊಡುವ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಈಶ್ವರ ದಾಸಪ್ಪನವರ ಸೇರಿದಂತೆ ರಾಯಚೂರ ಜಿಲ್ಲೆಯ ಅನೇಕ ವೈದ್ಯಾಧಿಕಾರಿಗಳು, ತಜ್ಞ ವೈದ್ಯರು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತಂಡವಾಗಿ ಉತ್ತಮ ಕಾರ್ಯ ಮಾಡುತ್ತಿದ್ದರಿಂದಾಗಿ ರಾಯಚೂರು ಜಿಲ್ಲಾ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳಾಗುತ್ತಿವೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ವೈದ್ಯರ ಮತ್ತು ಸಿಬ್ಬಂದಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದುಪಯೋಗಕ್ಕೆ ಸಲಹೆ: ಬಡ, ಮಧ್ಯೆಮ ವರ್ಗದ ಜನರಿಗೆ ಅನಾರೋಗ್ಯವು ಸವಾಲಾಗಿ ಪರಿಣಮಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸ್ಪಂದಿಸಿ ಆರೋಗ್ಯ ಸೌಕರ್ಯ ಕಲ್ಪಿಸುತ್ತಿದೆ. ರಾಯಚೂರನಲ್ಲಿನ ತಾಯಿ ಮಕ್ಕಳ ಆಸ್ಪತ್ರೆಯು ಜನಸ್ನೇಹಿಯಾಗಿದೆ. ಅಲ್ಲಿನ ಸೌಕರ್ಯ ಪಡೆಯಲು ಪಕ್ಕದ ಯಾದಗಿರಿ, ತೆಲಂಗಾಣ ರಾಜ್ಯದ ಜಿಲ್ಲೆಯ ಜನರು ಆಗಮಿಸುತ್ತಿದ್ದಾರೆ. ಇದು ಅಲ್ಲಿನ ವೈದ್ಯಕೀಯ ಸೌಕರ್ಯ ಸರಿಯಾಗಿದೆ ಎಂಬುದನ್ನು ತಿಳಿಸುತ್ತದೆ. ರಾಯಚೂರ ಜಿಲ್ಲೆಯ ಜನರು ಇದನ್ನು ಅರಿತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಆಗಮಿಸಿ ಅಲ್ಲಿನ ವೈದ್ಯಕೀಯ ಸೌಕರ್ಯ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್