ಬೆಂಗಳೂರಿನ ಕಸ ಸಮಸ್ಯೆ ಪರಿಹಾರಕ್ಕೆ ಜಿಬಿಎ ಹೊಸ ಅಭಿಯಾನಕ್ಕೆ ಚಾಲನೆ
ಬೆಂಗಳೂರು, 30 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಸ್ತೆ ಬದಿಯಲ್ಲಿ ಅಥವಾ ಖಾಲಿ ಜಾಗಗಳಲ್ಲಿ ಕಸ ಎಸೆದು ಹೋಗುವವರಿಗೆ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಠಿಣ ಪಾಠ ಕಲಿಸಲು ಮುಂದಾಗಿದೆ. “ನೀವು ರಸ್ತೆಗೆ ಕಸ ಹಾಕಿದರೆ, ಅದೇ ಕಸ ನಿಮ್ಮ ಮನೆ ಮುಂದೆ ಸುರಿಯಲಿದೆ ಎಂಬ ವಿಶಿಷ್ಟ ಸಂದೇಶದೊಂದಿಗೆ ಜಿಬಿಎ ಇಂ
Waste


ಬೆಂಗಳೂರು, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಸ್ತೆ ಬದಿಯಲ್ಲಿ ಅಥವಾ ಖಾಲಿ ಜಾಗಗಳಲ್ಲಿ ಕಸ ಎಸೆದು ಹೋಗುವವರಿಗೆ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಠಿಣ ಪಾಠ ಕಲಿಸಲು ಮುಂದಾಗಿದೆ. “ನೀವು ರಸ್ತೆಗೆ ಕಸ ಹಾಕಿದರೆ, ಅದೇ ಕಸ ನಿಮ್ಮ ಮನೆ ಮುಂದೆ ಸುರಿಯಲಿದೆ ಎಂಬ ವಿಶಿಷ್ಟ ಸಂದೇಶದೊಂದಿಗೆ ಜಿಬಿಎ ಇಂದು ಹೊಸ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.

ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಜಿಬಿಎ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ ಹೊಸ ರೀತಿಯ ಕ್ರಮ ಕೈಗೊಂಡಿದೆ. ರಸ್ತೆಯ ಬದಿಯಲ್ಲಿ ಕಸ ಎಸೆಯುವವರ ವಿರುದ್ಧ ಈಗಿನಿಂದ ಮಾರ್ಷಲ್‌ಗಳು ಕ್ರಮ ಕೈಗೊಳ್ಳಲಿದ್ದು, ಕಸ ಎಸೆಯುತ್ತಿರುವವರ ವಿಡಿಯೋವನ್ನು ದಾಖಲಿಸುತ್ತಿದ್ದಾರೆ. ನಂತರ, ಅದೇ ವ್ಯಕ್ತಿಯ ಮನೆ ಮುಂದೆ ಕಸ ಸುರಿಸಿ ಅವರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ಈ ಅಭಿಯಾನದ ಉದ್ದೇಶ, ಜನರಲ್ಲಿ ಎಚ್ಚರಿಕೆ ಮೂಡಿಸಿ ಮತ್ತೆ ಕಸ ಎಸೆಯದಂತೆ ಪ್ರೇರೇಪಿಸುವುದು. ಮೊದಲ ಹಂತದಲ್ಲಿ ನಗರದ 190 ವಾರ್ಡ್‌ಗಳಲ್ಲಿ ಪ್ರತಿ ವಾರ್ಡ್‌ನಲ್ಲಿ ಒಂದು ಮನೆ ಆಯ್ದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಿಬಿಎ ಅಧಿಕಾರಿಗಳ ಪ್ರಕಾರ, ರಸ್ತೆ ಬದಿಯಲ್ಲಿ ಕಸ ಎಸೆಯುವವರ ಮೇಲೆ ₹1,000 ರಿಂದ ₹10,000 ವರೆಗೆ ದಂಡ ವಿಧಿಸಲಾಗುವುದು. ದಂಡ ವಿಧಿಸಿದ ಬಳಿಕ ಅಧಿಕಾರಿಗಳು ಖುದ್ದಾಗಿ ಆ ಸ್ಥಳದಲ್ಲಿನ ಕಸ ತೆರವುಗೊಳಿಸುತ್ತಾರೆ.

ಇಂದು ಹೊಸಕೆರೆಹಳ್ಳಿ ಮತ್ತು ದತ್ತಾತ್ರಯನಗರ ಪ್ರದೇಶದಲ್ಲಿ ನಡೆದ ಘಟನೆಯೊಂದು ಇದೀಗ ಹೆಚ್ಚು ಗಮನ ಸೆಳೆದಿದೆ. ಗುಜರಿ ಅಂಗಡಿ ಮಾಲಿಕರು ಬಾಟಲಿ ಹಾಗೂ ಪ್ಲಾಸ್ಟಿಕ್ ಚೀಲಗಳ ರೂಪದಲ್ಲಿ ಕಸ ಎಸೆಯುತ್ತಿದ್ದರೆ, ಪೌರಕಾರ್ಮಿಕರು ಮತ್ತು ಮಾರ್ಷಲ್‌ಗಳು ಆ ಸ್ಥಳಕ್ಕೆ ತೆರಳಿ, ಗುಜರಿ ಅಂಗಡಿ ಮುಂದೆ ಕಸ ಸುರಿಸಿ ಎಚ್ಚರಿಕೆ ನೀಡಿದರು. ಬಳಿಕ ಮಾಲಿಕರು, “ಇನ್ಮುಂದೆ ಕಸವನ್ನು ಚೀಲಗಳಲ್ಲಿ ಹಾಕಿ ನೀಡುತ್ತೇವೆ, ಹೊರಗಡೆ ಎಸೆಯಲ್ಲ” ಎಂದು ಭರವಸೆ ನೀಡಿದರು.

ಈ ಅಭಿಯಾನ ಮುಂದಿನ ದಿನಗಳಲ್ಲಿ ನಗರದೆಲ್ಲೆಡೆ ಜಾರಿಗೆ ಬರಲಿದೆ. “ನಮ್ಮ ನಗರ ನಮ್ಮ ಹೊಣೆ” ಎಂಬ ಭಾವನೆ ನಾಗರಿಕರಲ್ಲಿ ಬೇರೂರಿಸುವುದೇ ಇದರ ಉದ್ದೇಶ. ಜನರು ತಮ್ಮ ಮನೆಯ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿದರೆ, “ಸ್ವಚ್ಛ ಮತ್ತು ಆರೋಗ್ಯಕರ ಬೆಂಗಳೂರು” ನಿರ್ಮಾಣ ಸಾಧ್ಯವೆಂಬ ವಿಶ್ವಾಸ ಅಧಿಕಾರಿಗಳದು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande