ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ವಿಚಾರಣೆ ನ.7ಕ್ಕೆ ಮುಂದೂಡಿಕೆ
ನ.5ರಂದು ಬೆಂಗಳೂರಿನಲ್ಲಿ ಶಾಂತಿ ಸಭೆ ನಡೆಸಲು ಕಲಬುರಗಿ ಉಚ್ಚ ನ್ಯಾಯಾಲಯ ಸೂಚನೆ
Court


ಕಲಬುರಗಿ, 30 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಕುರಿತು ಕಲಬುರಗಿಯ ಹೈಕೋರ್ಟ್ ಪೀಠ ಇಂದು ಮಹತ್ವದ ಸೂಚನೆ ನೀಡಿದೆ. ನವೆಂಬರ್‌ 5ರಂದು ಬೆಂಗಳೂರಿನಲ್ಲಿ ಶಾಂತಿಸಭೆ ನಡೆಸುವಂತೆ ಸೂಚನೆ ನೀಡಿರುವ ಪೀಠ, ವಿಚಾರಣೆಯನ್ನು ನವೆಂಬರ್‌ 7ಕ್ಕೆ ಮುಂದೂಡಿದೆ.

ಆರ್‌ಎಸ್‌ಎಸ್ ನವೆಂಬರ್‌ 2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಇದೇ ದಿನ ಐದು ಸಂಘಟನೆಗಳು ಸಹ ಪಥಸಂಚಲನಕ್ಕೆ ಅವಕಾಶ ಕೋರಿ ಹೈಕೋರ್ಟ್‌ನ ಮೊರೆ ಹೋಗಿದ್ದವು. ಈ ಎಲ್ಲ ಅರ್ಜಿಗಳ ಮೊದಲ ಸುತ್ತಿನ ವಿಚಾರಣೆಯನ್ನು ನಡೆಸಿದ ಕಲಬುರಗಿಯ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರ ಏಕಸದಸ್ಯ ಪೀಠವು ಅಕ್ಟೋಬರ್‌ 28ರಂದು ಎಲ್ಲಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಶಾಂತಿ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಿತ್ತು.

ಆದರೆ ಶಾಂತಿಸಭೆಯಲ್ಲಿ ಒಮ್ಮತ ಉಂಟಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಮತ್ತೊಂದು ಅವಕಾಶ ನೀಡಿದೆ. ನವೆಂಬರ್‌ 5ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಎಜಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಅರ್ಜಿದಾರರು ಹಾಗೂ ಎಜಿ ಶಶಿಕಿರಣ್ ಶೆಟ್ಟಿ ಭಾಗವಹಿಸಲಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಪ್ರತಿ ಸಂಘಟನೆಯಿಂದ ಮೂವರು ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಜಿಲ್ಲಾಡಳಿತದ ನಿರ್ಧಾರಕ್ಕೆ ಸಹಕರಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಜೊತೆಗೆ ಶಾಂತಿಸಭೆ ನಡೆಯುವ ಸ್ಥಳದ ಮಾಹಿತಿ ಅರ್ಜಿದಾರರಿಗೆ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ಎಜಿ ಶಶಿಕಿರಣ್ ಶೆಟ್ಟಿ ಕೋರ್ಟ್ ಸೂಚನೆಯನ್ನು ಸ್ವಾಗತಿಸಿ, ಶಾಂತಿ ಸಭೆ ಯಶಸ್ವಿಯಾಗಿ ನಡೆಯಲು ಸಹಕರಿಸುವುದಾಗಿ ತಿಳಿಸಿದ್ದಾರೆ.

ಆರ್‌ಎಸ್‌ಎಸ್ ಅಕ್ಟೋಬರ್‌ 19ರಂದು ಪಥಸಂಚಲನ ಆಯೋಜನೆ ಮಾಡಿತ್ತು. ಆದರೆ ಅರ್ಜಿಯಲ್ಲಿ ಸಂಪೂರ್ಣ ಮಾಹಿತಿಯಿಲ್ಲದಿದ್ದ ಕಾರಣ ಹಾಗೂ ವಿವಿಧ ಸಂಘಟನೆಗಳ ಮನವಿಯನ್ನು ಗಮನಿಸಿ ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಅನುಮತಿ ನಿರಾಕರಿಸಿದ್ದರು. ಈಗ ಹೈಕೋರ್ಟ್ ಮಧ್ಯಸ್ಥಿಕೆಯ ಹಿನ್ನೆಲೆಯಲ್ಲಿ ನವೆಂಬರ್ ೨ರ ಪಥಸಂಚಲನ ಮುಂದೂಡಿಕೆಯಾಗಿದ್ದು, ಮುಂದಿನ ನಿರ್ಧಾರ ನವೆಂಬರ್‌ 7ರಂದು ಕೋರ್ಟ್ ವಿಚಾರಣೆಯ ಬಳಿಕ ಸ್ಪಷ್ಟವಾಗಲಿದೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande