
ಬೆಂಗಳೂರು, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವಂತಹ ಕ್ವಾಂಟಮ್ ಸಿಟಿಯಲ್ಲಿ ಸಹಭಾಗಿತ್ವಕ್ಕೆ, ಸ್ವಿಟ್ಜರ್ಲೆಂಡ್ ಕಂಪನಿಗಳು ಹಾಗೂ ಕ್ವಾಂಟಮ್ ಕ್ಷೇತ್ರದ ಸಂಶೋಧನೆಯಲ್ಲಿ ಪ್ರಮುಖವಾಗಿರುವಂತಹ ಸಂಸ್ಥೆಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.
ಇಂದು ವಿಕಾಸ ಸೌಧದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಿಟ್ಜರ್ಲೆಂಡ್ ಪ್ರವಾಸದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಕ್ವಾಂಟಮ್ ಸಿಟಿಯಲ್ಲಿ ಹೂಡಿಕೆಗೆ ಆಹ್ವಾನ:
ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರು ನಗರವನ್ನು ವಿಶ್ವದ ಕ್ವಾಂಟಮ್ ಕ್ಷೇತ್ರದ ಕೇಂದ್ರಬಿಂದುವನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ನಡೆದ ದೇಶದ ಮೊದಲ ಕ್ವಾಂಟಮ್ ಸಮಾವೇಶದಲ್ಲಿ ಘೋಷಿಸಿದ್ದಂತೆ ಈಗಾಗಲೇ ಕ್ವಾಂಟಮ್ ಸಿಟಿಗೆ ಭೂಮಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ.
ಈ ಸಿಟಿಯ ಅಭಿವೃದ್ದಿಗಾಗಿ ಕ್ವಾಂಟಮ್ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿಶ್ವದ ಪ್ರಮುಖ ಸಂಸ್ಥೆಗಳಾದ ಇಟಿಹೆಚ್ ಜ್ಯೂರಿಚ್, ಸೆರಿ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ ಕ್ವಾಂಟಮ್ ಪರಿಣಿತ ಮಾನವ ಸಂಪನ್ಮೂಲ ಅಭಿವೃದ್ದಿಗಾಗಿ ಐಐಎಸ್‌ಸಿ ಜೊತೆಗೂಡಿ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. ನಮ್ಮ ರಾಜ್ಯದಲ್ಲಿ ಪರಿಣಿತ ಮಾನವ ಸಂಪನ್ಮೂಲ ಲಭ್ಯವಿದ್ದು, ಹೊಸ ಸಂಶೋಧನೆಗಳನ್ನು ಕೈಗೊಳ್ಳಲು ಉತ್ತಮ ಪರಿಸರವಿದೆ. ಈ ಹಿನ್ನಲೆಯಲ್ಲಿ ಸಂಶೋಧನಾ ಯೋಜನೆಗಳಲ್ಲಿ ಸಹಕರಿಸುವಂತೆ ನಮ್ಮ ಮನವಿಗೆ ಇಟಿಎಚ್ ಜ್ಯೂರಿಕ್ ಮಂಡಳಿಯ ಅಧ್ಯಕ್ಷರಾದ ಡಾ. ಮೈಕೇಲ್ ಹೆಂಗಾರ್ಟ್ನರ್ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಹೇಳಿದರು.
ಸ್ವಿಸ್‌ನೆಕ್ಸ್ ಕ್ವಾಂಟಮ್ ಸಮಾವೇಶದಲ್ಲಿ ಪಾಲ್ಗೊಂಡು, ನಮ್ಮ ರಾಜ್ಯದಲ್ಲಿ ಹೂಡಿಕೆಗೆ ಇರುವಂತಹ ಅವಕಾಶಗಳ ಬಗ್ಗೆ ವಿಶ್ವದ ಪ್ರಮುಖ ಕ್ವಾಂಟಮ್ ಕ್ಷೇತ್ರದ ಕಂಪನಿಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು. ಕ್ವಾಂಟಮ್ ಸಿಟಿಯ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು. ನಮ್ಮ ರಾಜ್ಯ ಅದರಲ್ಲೂ ಬೆಂಗಳೂರು ನಗರದ ತಾಂತ್ರಿಕ ಅವಕಾಶಗಳು, ಮಾನವ ಸಂಪನ್ಮೂಲ ಲಭ್ಯತೆ, ಹೂಡಿಕೆಗೆ ಉತ್ತಮ ಪರಿಸರ, ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಉತ್ತಮ ಸಹಕಾರದ ಬಗ್ಗೆ ಮಾಹಿತಿ ನೀಡಲಾಯಿತು. ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆಯೂ ಆಹ್ವಾನ ನೀಡಲಾಯಿತು ಎಂದು ಸಚಿವರು ತಿಳಿಸಿದರು.
ಕ್ವಾಂಟಮ್ ಬೇಸೆಲ್, ಮತ್ತು ಜೂರಿಚ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಗಳಿಗೆ ಭೇಟಿ:
ಐನ್‌ಸ್ಟೀನ್ ಅವರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಇಟಿಎಚ್ ಜೂರಿಕ್ ಸಂಸ್ಥೆಗೆ ಭೇಟಿ ನೀಡಿ ,ಸುಪರ್‌ಕಂಡಕ್ಟಿಂಗ್ ಕ್ಯೂಬಿಟ್ ಮತ್ತು ಟ್ರಾಪ್ಡ್ ಐಯಾನ್ ಸಿಸ್ಟಮ್ಸ್‌ಗಳ ಕುರಿತ ಸಂಶೋಧನೆಯಲ್ಲಿ ಇಪ್ಪತ್ತು ವರ್ಷಗಳಿಂದ ಪಯೋನಿಯರ್‌ಗಳಾಗಿ ಗುರುತಿಸಿಕೊಂಡಿರುವಂತಹ, ಇಟಿಎಚ್ ಜೂರಿಕ್ ಕ್ವಾಂಟಮ್ ಸೆಂಟರ್ ನ ನಿರ್ದೇಶಕರುಗಳಾದ ವಿಶ್ವವಿಖ್ಯಾತ ಪ್ರೊ. ಆಂಡ್ರಿಯಾಸ್ ವಾಲ್ರಾಫ್ ಹಾಗೂ ಪ್ರೊ. ಜೊನಥನ್ ಹೋಮ್ ಮತ್ತು ಪ್ರೊ. ಕ್ಲಾಸ್ ಎನ್ಸ್‌ಸ್ಲಿನ್ ಅವರನ್ನು ಮುಂದಿನ ಕ್ವಾಂಟಮ್ ಇಂಡಿಯಾ ಸಮ್ಮೇಳನದಲ್ಲಿ ಭಾಗವಹಿಸುವಂತೆ ಅಹ್ವಾನ ನೀಡಿದ್ದೇವೆ.
ಇಟಿಎಚ್ ಜ್ಯೂರಿಚ್ ವಿಶ್ವವಿದ್ಯಾಲಯದ ಪ್ರಯೋಗಾಲಯಗಳಲ್ಲಿ ಸಂಶೋಧಿಸಲಾದ ಹಲವಾರು ಸಂಶೋಧನೆಗಳು ಸ್ಟಾರ್ಟಪ್‌ಗಳಾಗಿ ಬೆಳೆದಿವೆ. ಇಂತಹ ಪರಿಸರವನ್ನು ಕ್ವಾಂಟಮ್ ಸಿಟಿಯಲ್ಲಿ ಅಳವಡಿಸುವ ನಿಟ್ಟಿನಲ್ಲಿ ಹಾಗೂ ಸಹಭಾಗಿತ್ವದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಸಚಿವರು ತಿಳಿಸಿದರು.
ಜೂರಿಚ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಗೆ ಭೇಟಿ ನೀಡುವ ಮೂಲಕ ಕ್ವಾಂಟಮ್ ಕಂಪ್ಯೂಟಿಂಗ್ ಅಭಿವೃದಿಗೆ ಅಗತ್ಯವಿರುವಂತಹ ಉಪಕರಣಗಳ ತಯಾರಿಕೆಯ ಬಗ್ಗೆ ಮಾಹಿತಿ ನೀಡಲಾಯಿತು. ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯದ ಸಂಶೋಧನಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಈ ಸಂಸ್ಥೆ ಮುಂದಾಗಿದೆ ಎನ್ನುವುದನ್ನು ಸಚಿವರು ತಿಳಿಸಿದರು.
ಜಿನೆವಾದ ಸೈನ್ಸ್ ಅಂಡ್ ಡಿಪ್ಲೋಮಸಿ ಆಂಟಿಸಿಪೇಟರ್ ಸಮಾವೇಶದಲ್ಲಿ ಭಾಗಿಯಾದ ಸಂಧರ್ಭದಲ್ಲಿ ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾದ ಪ್ರೊ. ಅಜಯ್ ಸೂದ್ ಅವರನ್ನು ಸಮಾವೇಶದಲ್ಲಿ ಭೇಟಿಯಾದ ಸಚಿವರು, ರಾಜ್ಯದ ಕ್ವಾಂಟಮ್ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಅಗತ್ಯವಿರುವಂತಹ ಸಲಹೆ ಹಾಗೂ ಸಹಕಾರ ನೀಡುವ ನಿಟ್ಟಿನಲ್ಲಿ ಚರ್ಚಿಸಿದರು. ಅಲ್ಲದೇ, ವಿಶ್ವದ ಇತರೆ ದೇಶಗಳ ಪ್ರಮುಖ ಸಂಶೋಧನಾ ಸಂಸ್ಥೆಗಳ ಜೊತೆಯಲ್ಲಿ ನಡೆಸುತ್ತಿರುವ ಸಭೆಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು, ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರ ಹಂಚಿನಾಳ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa