
ಕೊಪ್ಪಳ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗ್ರಾಹಕರಿಗೆ ಸೇವೆ ನೀಡುವಲ್ಲಿ ಸೇವಾ ನ್ಯೂನ್ಯತೆ ಎಸಗಿದ ಕೊಪ್ಪಳ ನಗರದ ಮಾರುತಿ ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕರಿಗೆ ಬಡ್ಡಿ ಸಹಿತ ಪರಿಹಾರ ಮೊತ್ತವನ್ನು ದೂರುದಾರರಿಗೆ ಪಾವತಿಸುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ದೂರುದಾರರಾದ ಕೊಪ್ಪಳದ ಪ್ರಹ್ಲಾದ ಶ್ರೀಶಪ್ಪ ಅಗಳಿ ಎಂಬುವವರು ದಿನಾಂಕ:07-07-2023 ರಂದು ನಗರದ ಮಾರುತಿ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ರೂ.25,500/- ಪಾವತಿಸಿ ಗೃಹ ಬಳಕೆಗಾಗಿ Whirlpool ಹೆಸರಿನ ವಾಷಿಂಗ್ ಮಷಿನ್ ಖರೀದಿಸಿದ್ದರು. ನಂತರ ವಾಷಿಂಗ್ ಮಷಿನ್ ಬಳಸುತ್ತಿದ್ದು, ಕೆಲ ಅವಧಿಯ ನಂತರ ವಾಷಿಂಗ್ ಮಷಿನ್ ಒಳಗಿನ ಡ್ರಮ್ ತುಕ್ಕು ಹಿಡಿದಿತ್ತು. ದೂರುದಾರರು ಖರೀದಿಸಿದ ವಾಷಿಂಗ್ ಮಷಿನ್ ತುಕ್ಕು ಹಿಡಿದ ಪರಿಣಾಮ ಬಟ್ಟೆ ಹಾಳಾಗುತ್ತವೆ ಎಂಬ ಉದ್ದೇಶದಿಂದ ವಾಷಿಂಗ್ ಮಷಿನ್ ಅನ್ನು ಉಪಯೋಗಿಸದೆ ಹಾಗೆಯೇ ಇಟ್ಟಿರುತ್ತಾರೆ.
ಈ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ದೂರುದಾರರು ಅನೇಕ ಬಾರಿ ಮನವಿ ಮಾಡಿದ್ದರು. ಆದರೆ ಎದುರುದಾರರು ಇಲ್ಲಿಯವರೆಗೂ ಸಮಸ್ಯೆ ಪರಿಹರಿಸಲಿಲ್ಲ. ಫೋನಿನ ಮೂಲಕ ಹಲವಾರು ಬಾರಿ ಸಂಪರ್ಕಿಸಿದರೂ ಎದುರುದಾರರು ಸಮಸ್ಯೆಗೆ ಸ್ಪಂದಿಸಲಿಲ್ಲ. ಎದುರುದಾರರ ಈ ಅನುಚಿತ ವ್ಯಾಪಾರ ಪದ್ಧತಿಯಿಂದ ಸೇವಾ ನ್ಯೂನ್ಯತೆ ಎಸಗಿದ್ದು, ತಮಗೆ ಉಂಟಾದ ತೊಂದರೆ ನಷ್ಟಕ್ಕೆ ಪರಿಹಾರ ಕೋರಿ ದೂರುದಾರರು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡ ಆಯೋಗವು ಎದುರುದಾರರಿಗೆ ಖುದ್ದು ನೋಟಿಸ್ ಜಾರಿ ಮಾಡಿದ್ದರೂ ಎದುರುದಾರರು ಜಿಲ್ಲಾ ಆಯೋಗಕ್ಕೆ ವಾಯಿದೆ ದಿನದಂದು ಗೈರು ಹಾಜರಾಗಿದ್ದು, ತಮ್ಮ ತಕರಾರು ಸಲ್ಲಿಸಲು ವಿಫಲರಾಗಿದ್ದಾರೆ. ಸಾಕ್ಷಿ ಹೇಳಿಕೆ ಅಥವಾ ಲಿಖಿತ, ಮೌಖಿಕ ವಾದ ಮಂಡನೆಯನ್ನು ಸಹ ಮಾಡಿಲ್ಲ.
ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು ಎನ್.ಮೇತ್ರಿ ರವರು ದೂರುದಾರರ ವಾದವನ್ನು ಆಲಿಸಿ, ಎದುರುದಾರರು ದೂರುದಾರರಿಗೆ Whirlpool ವಾಷಿಂಗ್ ಮಷಿನ್ ನೀಡದೇ ಇರುವುದು ಹಾಗೂ ಪ್ರಕರಣದಲ್ಲಿ ಹಾಜರಾಗದೇ ಇರುವುದನ್ನು ಪರಿಗಣಿಸಿ ಎದುರುದಾರರ ಅನುಚಿತ ವ್ಯಾಪಾರ ಪದ್ದತಿ ಅನುಸರಿಸಿರುವುದು ಹಾಗೂ ಸೇವಾ ನ್ಯೂನ್ಯತೆ ಎಸಗಿರುವುದು ಸಾಬೀತಾಗಿದೆ ಎಂದು ಎದುರುದಾರರು ದೂರುದಾರರಿಗೆ ವಾಷಿಂಗ್ ಮಷಿನ್ ಖರೀದಿ ಮೊತ್ತ ರೂ.25,500/- ಗಳನ್ನು ವಾರ್ಷಿಕ ಶೇ.6 ಬಡ್ಡಿ ಸಮೇತ ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗೆ ರೂ.10,000/- ಹಾಗೂ ದೂರಿನ ಖರ್ಚು ರೂ.5,000/- ಗಳನ್ನು ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಪಾವತಿಸುವಂತೆ ಆದೇಶಿಸಿದ್ದಾರೆ ಎಂದು ಆಯೋಗದ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್