
ಧಾರವಾಡ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಮಾಧ್ಯಮ ಅಕಾಡೆಮಿಯು 2025ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯದ ವಿವಿಧ ಮಾಧ್ಯಮ ಸಂಸ್ಥೆಗಳು ಈ ಕೆಳಕಂಡಂತೆ ದತ್ತಿನಿದಿ ಪ್ರಶಸ್ತಿಗಳನ್ನು ಸ್ಥಾಪಿಸಿವೆ. ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ ಅಭಿಮಾನಿ ಪ್ರಶಸ್ತಿ, ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ ಮೈಸೂರು ದಿಗಂತ ಪ್ರಶಸ್ತಿ, ಬೆಂಗಳೂರಿನ ಅಭಿಮನ್ಯು ಪತ್ರಿಕೆ ಸಂಸ್ಥೆಯು ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ, ಅಂಕಣ, ಸಂಪಾದಕೀಯ, ಪರಿಣಾಮಕಾರಿ ವರದಿಗೆ ಅಭಿಮನ್ಯು ಪ್ರಶಸ್ತಿ, ಬೆಂಗಳೂರಿನ ಪ್ರಜಾ ಸಂದೇಶ ಪತ್ರಿಕಾ ಸಂಸ್ಥೆಯು ಶೋಷಣೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನಕ್ಕೆ : ಪ್ರಜಾ ಸಂದೇಶ ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಿವೆ. ಈ ದತ್ತಿ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂ ನಗದು ಬಹುಮಾನ ಒಳಗೊಂಡಿವೆ.
ಈ ಪ್ರಶಸ್ತಿಗಳಿಗೆ ಆಸಕ್ತ ಪತ್ರಕರ್ತರು 01-01-2025 ರಿಂದ 25-10-2025 ರವರೆಗೆ ಪ್ರಕಟವಾಗಿರುವ ತಮ್ಮ ಒಂದು ಲೇಖನ-ವರದಿಯನ್ನು ಕಳುಹಿಸಬಹುದು.
ಕನ್ನಡ ದೈನಿಕ-ಟಿವಿ-ವಾಹಿನಿ, ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಹೆಸರು ಬರೆದಿರುವ ವರದಿ ಲೇಖನಿಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ. ಲೇಖನ-ವರದಿಗಳಲ್ಲಿ ಹೆಸರು ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು. ಲೇಖನ ವರದಿಗಳ ಲಕೋಟೆಯಲ್ಲಿ ಯಾವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುತ್ತಿರುವುದು ಎಂಬುದನ್ನು ಅಭಿಮಾನಿ ಪ್ರಶಸ್ತಿ-2025, ಮೈಸೂರು ದಿಗಂತ ಪ್ರಶಸ್ತಿ-2025, ಅಭಿಮನ್ಯು ಪ್ರಶಸ್ತಿ-2025 ಹಾಗೂ ಪ್ರಜಾ ಸಂದೇಶ ದತ್ತಿ ಪ್ರಶಸ್ತಿ-2025 ಎಂದು ಸ್ಪಷ್ಟವಾಗಿ ಬರೆದು ಲೇಖನಗಳನ್ನು ಇದೇ ನವೆಂಬರ್ 12, 2025 ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ವಿಶ್ವೇಶ್ವರಯ್ಯ ಕೇಂದ್ರ ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001. ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸ ಬಹುದು ಎಂದು ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa