
ಕೊಪ್ಪಳ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಎಫ್.ಡಿ ಸ್ಕೀಮ್ ನಲ್ಲಿ ಮೆಚ್ಯೂರಿಟಿ ಅವಧಿ ನಂತರ ಹಣ ಪಾವತಿಸಲು ಸತಾಯಿಸಿದ ಗಂಗಾವತಿ ತಾಲ್ಲೂಕಿನ ಹಿರೇಜಂತಕಲ್ ನಲ್ಲಿರುವ ಸುರಕ್ಷಾಬಂಧು ಚಿಟ್ಸ್(ಕರ್ನಾಟಕ) ಪ್ರೈ.ಲಿ. ಸಂಸ್ಥೆಗೆ ದಂಡ ಸಹಿತ ಮೆಚ್ಯೂರಿಟಿ ಹಣವನ್ನು ದೂರುದಾರರಿಗೆ ಪಾವತಿಸುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ವಿಜಯನಗರ ಜಿಲ್ಲೆಯ ಹೊಸಪೇಟೆಯ ದೂರುದಾರರಾದ ನಂ.1 ಶಶಿಧರ ಎ.ಬಸವನಗೌಡ ಹಾಗೂ ಇನ್ನಿಬ್ಬರು ಗಂಗಾವತಿ ತಾಲ್ಲೂಕಿನ ಹಿರೇಜಂತಕಲ್‍ನಲ್ಲಿರುವ ಸುರಕ್ಷಾಬಂಧು ಚಿಟ್ಸ್(ಕರ್ನಾಟಕ) ಪ್ರೈ.ಲಿ. ಸಂಸ್ಥೆಯಲ್ಲಿ ಒಂದು ವರ್ಷದ ಅವಧಿಗೆ ಎಫ್.ಡಿ ಸ್ಕೀಂ ಮಾಡಿಸಿದ್ದರು. ಒಂದು ವರ್ಷದ ಅವಧಿ ಪೂರ್ಣಗೊಂಡ ನಂತರ ಎಫ್.ಡಿ ಗಳು ಮೆಚ್ಯೂರಿಟಿಯಾಗಿದ್ದು, ಮೆಚ್ಯೂರಿಟಿ ಹಣವನ್ನು ಪಾವತಿಸುವಂತೆ ದೂರುದಾರರು ಸಂಸ್ಥೆಯ ನಿರ್ದೇಶಕರಾದ ಎದುರುದಾರರಾದ ನಂ.1 ಗೌರಮ್ಮ ಮಹಾಲಿಂಗಪ್ಪ ಹಾಗೂ ಎದುರುದಾರ ನಂ.2 ವಿನಯಕುಮಾರ ಮಹಾಲಿಂಗಪ್ಪ ಅವರ ಬಳಿ ಕೇಳಿದ್ದರು. ಆದರೆ ಎದುರುರದಾರರು ಇಂದು, ನಾಳೆ ಎಂದು ಹಣ ನೀಡದೇ ಸತಾಯಿಸಿದ್ದರು. ಎದುರುದಾರರ ಅನುಚಿತ ವ್ಯಾಪಾರ ಪದ್ಧತಿಯಿಂದ ಸೇವಾ ನ್ಯೂನ್ಯತೆ ಎಸಗಿದ್ದು, ತಮಗೆ ಉಂಟಾದ ತೊಂದರೆ ನಷ್ಟಕ್ಕೆ ಪರಿಹಾರ ಕೋರಿ ದೂರುದಾರರು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡ ಆಯೋಗವು ಎದುರುದಾರರಿಗೆ ಖುದ್ದು ನೋಟಿಸ್ ಜಾರಿ ಮಾಡಿದ್ದರೂ ಎದುರುದಾರರು ಜಿಲ್ಲಾ ಆಯೋಗಕ್ಕೆ ವಾಯಿದೆ ದಿನದಂದು ಗೈರು ಹಾಜರಾಗಿದ್ದು, ತಮ್ಮ ತಕರಾರು ಸಲ್ಲಿಸಲು ವಿಫಲರಾಗಿದ್ದಾರೆ. ಸಾಕ್ಷಿ ಹೇಳಿಕೆ ಅಥವಾ ಲಿಖಿತ, ಮೌಖಿಕ ವಾದ ಮಂಡನೆಯನ್ನು ಸಹ ಮಾಡಿಲ್ಲ.
ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು ಎನ್.ಮೇತ್ರಿ ರವರು ದೂರುದಾರರ ವಾದವನ್ನು ಆಲಿಸಿ, ಎದುರುದಾರರು ದೂರುದಾರರಿಗೆ ಒಂದು ವರ್ಷದ ಫಿಕ್ಸ್ ಡಿಪಾಸಿಟ್ ಸ್ಕೀಮ್‍ನಲ್ಲಿ ಮಾಆಡಿಸಿದ ಎಫ್.ಡಿಗಳ ಮೊತ್ತವನ್ನು ನೀಡದೇ ಇರುವುದು ಹಾಗೂ ಪ್ರಕರಣದಲ್ಲಿ ಹಾಜರಾಘದೇ ಇರುವುದನ್ನು ಪರಿಗಣಿಸಿ ಮತ್ತು ಎದುರುದಾರರಿಂದ ಉಂಟಾದ ಸೇವಾ ನ್ಯೂನ್ಯತೆ, ಅನುಚಿತ ವ್ಯಾಪಾರ ಪದ್ಧತಿಗಾಗಿ ಎದುರುದಾರರು ದೂರುದಾರರಿಂದ ಪಡೆದುಕೊಂಡ ಒಂದು ವರ್ಷದ ಎಫ್.ಡಿ ಸ್ಕೀಮ್‍ನಲ್ಲಿ ಮಾಡಿಸಿದ ಎಫ್.ಡಿ ಮೊತ್ತಗಳಾದ 1ನೇ ದೂರುದಾರರಿಗೆ ರೂ.3,50,000/-, 2ನೇ ದೂರುದಾರರಿಗೆ ರೂ.10,00,000/- ಮತ್ತು 3ನೇ ದೂರುದಾರರಿಗೆ ರೂ.10,00,000/- ಗಳಿಗೆ ತಲಾ ಶೇ.6 ರ ಬಡ್ಡಿ ಸಮೇತ ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ದೂರುದಾರರಿಗೆ ನೀಡುವಂತೆ ಆದೇಶಿಸಿದೆ.
ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗೆ ರೂ.10,000/- ಹಾಗೂ ದೂರಿನ ಖರ್ಚು ರೂ.5,000/- ಗಳನ್ನು ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶಿಸಿದ್ದಾರೆ ಎಂದು ಆಯೋಗದ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್