
ರಾಯಚೂರು, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯಿದೆಯನ್ನು ಉಲ್ಲಂಘಿಸಿದ 1,82,000 ಜನರಿಗೆ ದಂಡ ವಿದಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಸಮಿತಿಯ ಶಿಫಾರಸುಗಳ ಅನುಷ್ಠಾನದ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಅವರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಸಮಿತಿಯ ಶಿಫಾರಸುಗಳ ಅನುಷ್ಠಾನದ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವ, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ-2003 ಅಡಿಯಲ್ಲಿ ಏಪ್ರಿಲ್‍ನಿಂದ ಸೆಪ್ಟೆಂಬರ್-2025 ತಿಂಗಳವರೆಗೆ ಸುಮಾರು 1,82,000 ಜನರಿಗೆ ದಂಡ ವಿದಿಸಲಾಗಿದೆ. ಶಾಲಾ/ಕಾಲೇಜುಗಳಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿ 2470 ಜನರು ಧೂಮಪಾನ ನಿಷೇಧ ಕಾಯಿದೆಯನ್ನು ಉಲ್ಲಂಘನೆ ಮಾಡಿದ್ದು ಅವರೆಲ್ಲರಿಗೂ ದಂಡ ವಿಧಿಸಲಾಗಿದೆ. ಇದರಿಂದಾಗಿ ಪ್ರತಿ ವರ್ಷ 45 ಲಕ್ಷ ರೂ.ದಂಡ ಸಂಗ್ರಹವಾಗುತ್ತಿದೆ. ಈ ಪೈಕಿ, 21 ವರ್ಷದೊಳಗಿನ ಯುವಜನರ ದತ್ತಾಂಶ ನೀಡಬೇಕು ಎಂದು ವಿ.ಎಸ್. ಉಗ್ರಪ್ಪ ಅವರು ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.
21 ವರ್ಷದೊಳಗಿನ ಯುವಜನರನ್ನು ಧೂಮಪಾನ, ಮದ್ಯಪಾನ, ತಂಬಾಕು ಸೇವನೆ, ಡ್ರಗ್ಸ್ ಸೇವೆಯಂತಹ ಮಾದಕ ವಸ್ತುಗಳ ಸೇವನೆಯಿಂದ ವ್ಯಸನ ಮುಕ್ತರನ್ನಾಗಿಸಲು ಮಾದಕ ವಸ್ತು ವ್ಯಸನ ಮುಕ್ತ ಕೇಂದ್ರಗಳ ಮೂಲಕ ಏಪ್ರಿಲ್ ನಿಂದ ಸೆಪ್ಟೆಂಬರ್-2025ರವರೆಗೆ ಸುಮಾರು 1 ಲಕ್ಷ ಯುವಜನರಿಗೆ ಸಮಾಲೋಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಮತ್ತು ನಿಮಾನ್ಸ್ ಸಹಯೋಗದಲ್ಲಿ ಟೆಲಿಮಾನಸ್ 14,416 ಸಹಾಯವಾಣಿಯನ್ನು ತೆರೆಯಲಾಗಿದೆ. ಈ ಸಹಾಯವಾಣಿ ಮೂಲಕ ಮಾದಕ ವ್ಯಸನ ಪೀಡಿತ ಮಕ್ಕಳ ಮುಂದಿನ ಭವಿಷ್ಯವನ್ನು ಈ ಸುಧಾರಿಸಲು ಅಗತ್ಯ ಸಹಾಯ ಮತ್ತು ಸಮಾಲೋಚನೆ ಪಡೆಯಬಹುದಾಗಿದೆ.
ಅತ್ಯಾಚಾರ, ಮಹಿಳಾ ದೌರ್ಜನ್ಯ ಆತ್ಮಹತ್ಯೆ ಮತ್ತು ಇತರ ಪ್ರಕರಣಗಳನ್ನು ವೈಭವೀಕರಿಸಿ ಭಯಗೊಳ್ಳುವಂತೆ ಪ್ರಸಾರ ಮಾಡುವುದನ್ನು ದೃಶ್ಯ ಮಾಧ್ಯಮಗಳು ನಿಯಂತ್ರಿಸಬೇಕು. ಪ್ರೆಸ್ ಕೌನ್ಸಿಲ್ ಮಾರ್ಗಸೂಚಿಗಳನ್ನು ದೃಶ್ಯ ಮಾಧ್ಯಮಗಳು ಅಳವಡಿಸಿಕೊಳ್ಳಬೇಕು. ಯಾರು ಈ ರೀತಿಯ ಪ್ರಕರಣಗಳಿಗೆ ಪ್ರಚಾರ ನೀಡುತ್ತಾರೋ ಅವರ ಮೇಲೆ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ(ನಿಷೇಧ) ಕಾಯ್ದೆ-1986 ರಡಿಯಲ್ಲಿ ಸ್ವಯಂ ಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಬೇಕು.
ಅಥವಾ ಕೇಬಲ್ ಆಕ್ಟ್ ಇದ್ದರೆ ಆ ಕಾಯಿದೆಯಡಿಯಲ್ಲಿ ಕ್ರಮ ವಹಿಸಲು ಅಥವಾ ಫಿಲ್ಮ್ಸ್ ಆ್ಯಕ್ಟ್ ಇದ್ದರೆ ಆ ಕಾಯಿದೆಯಡಿಯಲ್ಲಿ ಕ್ರಮ ವಹಿಸಲು, ಪತ್ರಿಕೋದ್ಯಮಕ್ಕೆ ಸಂಬಂಧಿಸಿದ್ದರೆ ಪತ್ರಿಕೋದ್ಯಮ ಕಾಯಿದೆಯಡಿ ಕ್ರಮವಹಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್