ಪಾಲಿಕೆಯ ಮಳಿಗೆಗಳು ಪಾರದರ್ಶಕವಾಗಿ ನಿರ್ವಹಣೆಯಾಗಲಿ : ಅಧ್ಯಕ್ಷೆ ನರಸಮ್ಮ
ರಾಯಚೂರು, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯ ಅಧೀನದಲ್ಲಿನ ಎಲ್ಲಾ ಮಳಿಗೆಗಳು ಉತ್ತಮ ನಿರ್ವಹಣೆ ಆಗಬೇಕು. ಬಾಡಿಗೆ ದರ, ಒಪ್ಪಂದ ಸೇರಿದಂತೆ ಯಾವುದೇ ವಿಷಯಗಳ ಬಗ್ಗೆ ದೂರುಗಳು ಬಾರದ ಹಾಗೆ ಎಚ್ಚರಿಕೆ ವಹಿಸಬೇಕು. ಪಾರದರ್ಶಕತೆಗೆ ಒತ್ತು ಕೊಡಬೇಕು ಎಂದು ರಾಯಚೂರು ಮಹಾನಗರ ಪಾಲ
ಪಾಲಿಕೆಯ ಮಳಿಗೆಗಳು ಪಾರದರ್ಶಕವಾಗಿ ನಿರ್ವಹಣೆಯಾಗಲಿ : ಅಧ್ಯಕ್ಷೆ ನರಸಮ್ಮ


ರಾಯಚೂರು, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯ ಅಧೀನದಲ್ಲಿನ ಎಲ್ಲಾ ಮಳಿಗೆಗಳು ಉತ್ತಮ ನಿರ್ವಹಣೆ ಆಗಬೇಕು. ಬಾಡಿಗೆ ದರ, ಒಪ್ಪಂದ ಸೇರಿದಂತೆ ಯಾವುದೇ ವಿಷಯಗಳ ಬಗ್ಗೆ ದೂರುಗಳು ಬಾರದ ಹಾಗೆ ಎಚ್ಚರಿಕೆ ವಹಿಸಬೇಕು. ಪಾರದರ್ಶಕತೆಗೆ ಒತ್ತು ಕೊಡಬೇಕು ಎಂದು ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಪಾಲಿಕೆಯ ವ್ಯಾಪ್ತಿಯ ಮಳಿಗೆಗಳಿಗೆ ಈ ಹಿಂದೆ ನಿಗದಿಪಡಿಸಿದ ಬಾಡಿಗೆ ದರವನ್ನು ಪರಿಷ್ಕರಿಸಲು ಪರಿಶೀಲಿಸಬಹುದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ವಿಷಯ ಪ್ರಸ್ತಾಪಿಸಿದರು. ಮಳಿಗೆಗಳನ್ನು ಬಾಡಿಗೆ ಪಡೆದವರೇ ಬೇರೆ; ಅಲ್ಲಿ ವ್ಯಾಪಾರ ಮಾಡುವವರೇ ಬೇರೆಯಾಗಿರುತ್ತಾರೆ.

ಈ ಬಗ್ಗೆ ಸಹ ಪರಿಶೀಲಿಸಬೇಕು. ಬಾಡಿಗೆ ಪಡೆದಾಗ ನೀಡುವ ಒಪ್ಪಂದ ಪತ್ರ ಹಾಗೂ ಅಲ್ಲಿ ವ್ಯಾಪಾರಕ್ಕಾಗಿ ನೀಡುವ ವ್ಯಾಪಾರ ಪರವಾನಿಗೆಯನ್ನು ಪರಿಶೀಲಿಸಬೇಕು ಎಂದು ಶಾಸಕರಾದ ಡಾ.ಎಸ್ ಶಿವರಾಜ ಪಾಟೀಲ್ ಹಾಗೂ ಪಾಲಿಕೆಯ ಸದಸ್ಯರಾದ ಬಸವರಾಜ ಅವರು ಧನಿಗೂಡಿಸಿದರು.

ತನಿಖೆಗೆ ಒತ್ತಾಯ: ಮಳಿಗೆಗಳನ್ನು ಬಾಡಿಗೆ ಪಡೆದವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಕಟ್ಟಡದ ವರ್ಗಾವಣೆಯನ್ನೂ ಪಾಲಿಕೆಯ ಅಧಿಕಾರಿಗಳೇ ಈ ಹಿಂದೆ ಮಾಡಿರುವುದರ ಬಗ್ಗೆ ತನಿಖೆಯಾಗಬೇಕು ಎಂದು ಪಾಲಿಕೆಯ ಸದಸ್ಯ ಎನ್.ಶ್ರೀನಿವಾಸ ಅವರು ಇದೆ ವೇಳೆ ಒತ್ತಾಯಿಸಿದರು.

ಮಹಾನಗರ ಪಾಲಿಕೆಯ ಮಳಿಗೆಗಳಿಗೆ ಈ ಹಿಂದೆ ಎಷ್ಟು ಬಾಡಿಗೆ ದರ ನಿಗಧಿಪಡಿಸಲಾಗಿತ್ತು. ಈ ಮಧ್ಯೆ ಬಾಡಿಗೆ ದರ ಹೆಚ್ಚಳ ಮಾಡಲಾಗಿದೆಯೋ ಅಥವಾ ಇಲ್ಲವೋ? ಮಳಿಗೆಯನ್ನು ಬಾಡಿಗೆ ಪಡೆದವರು ಹೆಚ್ಚಿನ ಬೆಲೆಗೆ ಬೇರೆಯವರೆಗೆ ಬಾಡಿಗೆ ನೀಡುತ್ತಿದ್ದಾರೆ ಎನ್ನುವ ಸಂದೇಹದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು. ಬಾಡಿಗೆ ದರ ಹೆಚ್ಚಳ ಅಗತ್ಯವಿದೆ ಎಂಬುದರ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮವಹಿಸಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.

ಸುಗಮ ಸಂಚಾರಕ್ಕಾಗಿ ನಗರದಲ್ಲಿನ ಎಲ್ಲಾ ರಸ್ತೆಗಳಲ್ಲಿನ ತಗ್ಗು ಗುಂಡಿಗಳನ್ನು ತ್ವರಿತಾಗಿ ಮುಚ್ಚುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ನಗರದ ಎಲ್ಲ ರಸ್ತೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿದೆ. ಇದಕ್ಕಾಗಿ ಸೂಕ್ತ ಅನುದಾನ ಮೀಸಲಿರಿಸುವ ಮತ್ತು ಪಡೆದುಕೊಳ್ಳುವ ಕಾರ್ಯ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯರು ಮತ್ತು ಪಾಲಿಕೆಯ ಸದಸ್ಯರು ಸಲಹೆ ಮಾಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೇಟ್ಲಾಬುರ್ಜಾದಿಂದ ಮಾವಿನಕೆರೆಗೆ ಹೋಗುವ ಮುಖ್ಯ ರಸ್ತೆಗೆ ಹಾಗೂ ಮನ್ಸಲಪೂರು ಗ್ರಾಮದ ರಸ್ತೆಗೆ ಹೊಸ ನಾಮಕರಣ ಮಾಡಿ ನಾಮಫಲಕ ಅಳವಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ನ್ಯಾಯಾಲಯದ ಮತ್ತು ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಆದೇಶದನ್ವಯ ವಾರ್ಡವಾರು ಬೀದಿ ನಾಯಿಗಳ ಗಣತಿ ಮಾಡುವ ಕುರಿತು ಮತ್ತು ಹೊಸ ಆಧುನಿಕ ಎಬಿಸಿ ಶೇಡ್ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಪತ್ರಕರ್ತರಿಗೆ ದಾವಣಗೇರಿ ಜಿಲ್ಲೆಯ ಮಾದರಿಯಲ್ಲಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ಮಹಾನಗರ ಪಾಲಿಕೆಯಲ್ಲಿ ಪ್ರತಿ ವರ್ಷದ ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟು ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.

ನಿವೇಶನ ರಹಿತ ಪತ್ರಕರ್ತರಿಗೆ ನಿಯಮಾನುಸಾರ ಅನುಮೋದನೆ ಪಡೆದು ನಿವೇಶನ ಪೂರೈಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಪಾಲಿಕೆಯ ಉಪಾಧ್ಯಕ್ಷರಾದ ಸಾಜೀದ್ ಸಮೀರ್, ಪಾಲಿಕೆಯ ಸದಸ್ಯರಾದ ಜಯಣ್ಣ, ಎನ್ ಶ್ರೀನಿವಾಸರೆಡ್ಡಿ ಸೇರಿದಂತೆ ವಾರ್ಡ್ ಸದಸ್ಯರು, ಪಾಲಿಕೆಯ ಆಯುಕ್ತರಾದ ಜುಬೀನ್ ಮೊಹಪಾತ್ರ, ಉಪ ಆಯುಕ್ತರಾದ ಸಂತೋಷ ರಾಣಿ ಸೇರಿದಂತೆ ಪಾಲಿಕೆಯ ವಿಭಾಗ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande