
ಕೊಪ್ಪಳ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಸಮುದಾಯ ಆರೋಗ್ಯ ಕೇಂದ್ರ, ಹಿರೇಸಿಂದೋಗಿ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಕಲಾ ಸಂಸ್ಥೆ(ರಿ), ಅಳವಂಡಿ ಇವರಿಂದ ಬಹದ್ದೂರಬಂಡಿ ಗ್ರಾಮದಲ್ಲಿ ಬಾಲ್ಯವಿವಾಹ ನಿಷೇಧ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಜಾನಪದ ಕಲಾ ತಂಡದಿಂದ ಬೀದಿನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಆರೋಗ್ಯ ಇಲಾಖೆಗಳ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ ನಾಲ್ಕು ಕಲಾತಂಡಗಳಿಂದ ವಿವಿಧ ಗ್ರಾಮಗಳಲ್ಲಿ ಅರಿವು ಮೂಡಿಸಲಾಗುತ್ತದೆ.
ಬಾಲ್ಯವಿವಾಹ ಮಾಡುವುದರಿಂದ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅಪೌಷ್ಠಿಕ ಮಗು, ವಿಕಲಾಂಗ ಮಗುವಿನ ಜನನ, ಗರ್ಭಪಾತ ಹಾಗೂ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಬಾಲ್ಯವಿವಾಹ ಸಮಾಜದ ಒಂದು ಪಿಡುಗು. ಪಾಲಕರು ಮತ್ತು ಮಕ್ಕಳ ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡಿ ನಂತರ ಸರ್ಕಾರ ನಿಗದಿಪಡಿಸಿದ ಸರಿಯಾದ ವಯಸ್ಸಿಗೆ ಮದುವೆ ಮಾಡಬೇಕು ಎಂದು ಹೇಳಿದರು.
ಮಕ್ಕಳ ಬಾಲ್ಯವನ್ನು ಅವರಿಗೆ ಅನುಭವಿಸಲು ಬಿಡಬೇಕು. 2006ರ ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯವಿವಾಹ ಮಾಡಿದರೆ ಅಂತವರ ವಿರುದ್ಧ 2 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ಹಾಗೂ ರೂ.1 ಲಕ್ಷ ದಂಡ ವಿಧಿಸಲಾಗುತ್ತದೆ. ಬಾಲ್ಯವಿವಾಹ ಮಾಡಲು ಪಾಲಕರಲ್ಲಿರುವ ಮೂಢನಂಬಿಕೆ, ಅನಕ್ಷರತೆ, ಆಸ್ತಿ ಉಳಿಸಿಕೊಳ್ಳುವಿಕೆ ಮುಂತಾದ ಕಾರಣಗಳಿಂದ ಬಾಲ್ಯವಿವಾಹ ನಡೆಯುತ್ತದೆ. ಆದ್ದರಿಂದ ಗ್ರಾಮದಲ್ಲಿ ಯಾರೂ ಬಾಲ್ಯವಿವಾಹ ಮಾಡದಂತೆ ಎಚ್ಚರಿಕೆ ವಹಿಸಬೇಕು. ಎಲ್ಲರೂ ಸೇರಿ ಬಾಲ್ಯ ವಿವಾಹ ಮುಕ್ತ ಕೊಪ್ಪಳ ಜಿಲ್ಲೆ ಯನ್ನಾಗಿ ಮಾಡಲು ಸಹಕರಿಸಬೇಕು ಎಂದು ಹೇಳಿದರು.
ತಾಯಿ-ಮಕ್ಕಳ ಆರೋಗ್ಯ ರಕ್ಷಣೆ ಕುರಿತು, ಕುಟುಂಬ ಕಲ್ಯಾಣ ಕಾರ್ಯಕ್ರಮದ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳು, ಸೋಂಕಿತ ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕನ್‍ಗುನ್ಯ, ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗಗಳ ನಿಯಂತ್ರಣ, ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ ಹಾಗೂ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಉತ್ತಮ ಜೀವನ ಶೈಲಿಯ ಆಹಾರ ಸೇವನೆ ಮತ್ತು ಆರೋಗ್ಯಕರ ಅಭ್ಯಾಸಗಳು, ಮಾನಸಿಕ ಆರೋಗ್ಯ ಕಾರ್ಯಕ್ರಮ, ಹಾವು ಕಡಿತ ನಿಯಂತ್ರಣ, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಹಾಗೂ ಇತರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಕಲಾತಂಡಗಳಿಂದ ಜಾಗೃತಿ ಮೂಡಿಸಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದಾದಾಪೀರ್ ಮಂಡಲಗೇರಿ, ಮಾಜಿ ಗ್ರಾ.ಪಂ. ಸದಸ್ಯರಾದ ರಾಜಾಸಾಬ್, ಶಿವಪ್ಪ ಗ್ಯಾನಪ್ಪನವರ್, ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಕಲಾ ಸಂಸ್ಥೆಯ ವೀರೇಶ್, ಶ್ರೀಮತಿ ಸಿದ್ದಲಿಂಗಮ್ಮ, ಮಹದೇವಪ್ಪ, ಸಿದ್ದಲಿಂಗಯ್ಯ ಸ್ವಾಮಿ, ನಾಗರಾಜ, ವಿರುಪಾಕ್ಷಪ್ಪ, ಆಶಾ ಕಾರ್ಯಕರ್ತೆಯರಾದ ರತ್ನಮ್ಮ, ಮಾಲಂಬಿ, ಗ್ರಾಮದ ಮುಖಂಡರು, ನಾಗರಿಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಯುವಕರು, ಸಾರ್ವಜನಿಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್