
ಗದಗ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಹಿಂಗಾರು ಹಂಗಾಮಿನಲ್ಲಿ ಕಡಲೆ ಬೆಳೆಯಲ್ಲಿ ಪ್ರಮುಖವಾಗಿ 10 ಜಿಲ್ಲೆಗಳು ಹೆಚ್ಚಿನ ವಿಸ್ತೀರ್ಣ ಹೊಂದಿದ್ದು, ರಾಜ್ಯದ ಸರಾಸರಿ ಇಳುವರಿ(2017-18 ರಿಂದ 2021-22) 634ಕೆ.ಜಿ/ಹೆ ಇರುತ್ತದೆ. ಇದಕ್ಕೆ ಹೋಲಿಸಿದಾಗ ಗದಗ ಜಿಲ್ಲೆಯ ಇಳುವರಿಯು 159 ಕೆ.ಜಿ./ಹೆ. ಆಗಿದ್ದು, ರಾಜ್ಯದ ಸರಾಸರಿಯ ಕೇವಲ ಶೇ.25 ಮಾತ್ರ ಆಗಿರುತ್ತದೆ. ಹೆಚ್ಚಿನ ವಿಸ್ತೀರ್ಣ ಮತ್ತು ಅತಿ ಕಡಿಮೆ ಇಳುವರಿ ಇರುವದರಿಂದ ರೈತ ಬಾಂಧವರು ಜಿಲ್ಲೆಯಲ್ಲಿ ಅಧಿಕ ಇಳುವರಿಗಾಗಿ ಈ ಕೆಳಗಿನ ಸುಧಾರಿತ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡಲೆ ಬೆಳೆಯಲ್ಲಿ ಅಧಿಕ ಇಳುವರಿಗಾಗಿ ಸುಧಾರಿತ ತಾಂತ್ರಿಕತೆಗಳು : ಸುಧಾರಿತ, ರೋಗ ನಿರೋಧಕ, ಕಡಿಮೆ ಅವಧಿಯ ಹಾಗೂ ಒತ್ತಡ ಸಹಿಷ್ಣತೆ ತಳಿಯ ಬಿತ್ತನೆ ಬೀಜಗಳನ್ನು ಉಪಯೋಗಿಸುವುದು. ಯಾಂತ್ರೀಕೃತ ಕೂರಿಗೆ ಬಿತ್ತನೆ/ಊರುಗಾಳು ಪದ್ಧತಿ ಅನ್ವಯ ಸರಿಯಾದ ಬೆಳೆ ಅಂತರ ಕಾಪಾಡುವುದು.(30/45 ಸೆಂ.ಮೀ. 10ಸೆಂ.ಮೀ.). ಬಿತ್ತನೆಯ ಸಮಯದಲ್ಲಿ ಎಕರೆಗೆ 8 ಕಿ.ಗ್ರಾಂ. ಮೈಕೋರೈಜಾ ಜೈವಿಕ ಗೊಬ್ಬರವನ್ನು 200 ಕಿ.ಗ್ರಾಂ. ಎರೆಹುಳು ಗೊಬ್ಬರದ ಜೊತೆಗೆ ಮಿಶ್ರಣ ಮಾಡಿ ಬಿತ್ತನೆಯ ಸಾಲಿನಲ್ಲಿ ಮಣ್ಣಿನಲ್ಲಿ ಹಾಕಿ ಬೆರೆಸಬೇಕು. ಬಿತ್ತನೆ ಮಾಡುವಾಗ ಶಿಲೀಂಧ್ರನಾಶಕಗಳಿಂದ ಹಾಗೂ ಜೈವಿಕ ಗೊಬ್ಬರಗಳಾದ ಪಿ.ಎಸ್.ಬಿ., ಮತ್ತು ರೈಜೋಬಿಯಂಗಳಿಂದ ಬೀಜೋಪಚಾರ ಕೈಗೊಳ್ಳಬೇಕು.ಕಡಲೆ ಬೆಳೆಯ ಬೆಳವಣಿಗೆ ಹಂತದಲ್ಲಿ(ಬೆಳೆ ಹಂತ:35-40 ದಿನಗಳಲ್ಲಿ) ತಪ್ಪದೇ ಕುಡಿ ಚಿವುಟುವುದು. ಸಮಗ್ರ ಪೋಷಕಾಂಶಗಳ ಬಳಕೆಯೊಂದಿಗೆ, ಸುಧಾರಿತ ಬೇಸಾಯ ಕ್ರಮಗಳ ಪ್ರಕಾರ ಸಾವಯವ ಗೊಬ್ಬರಗಳನ್ನು ಬಳಸುವುದು, ರಸಗೊಬ್ಬರಗಳನ್ನು ಬಳಸುವುದು, ನ್ಯಾನೊ ಯೂರಿಯಾ ಇತ್ಯಾದಿಗಳನ್ನು ಬಳಸುವುದು. ದ್ವಿದಳ ಧಾನ್ಯ ಬೆಳೆ ಅವಧಿಯಲ್ಲಿ ಸೂಕ್ಷ್ ಪೋಷಕಾಂಶಗಳನ್ನು ಒಳಗೊಂಡಂತೆ ಸಮಗ್ರ ಪೋಷಕಾಂಶ ನಿರ್ವಹಣೆ ಕೈಗೊಳ್ಳುವುದು.ಬೆಳೆಯಲ್ಲಿ ತೇವಾಂಶ ಕಾಪಾಡುವುದು ಮತ್ತು ಬೆಳೆಯ ಸಂದಿಗ್ಧ ಹಂತಗಳಲ್ಲಿ ನೀರು ಕೊಡಬೇಕು.ಬೇವಿನ ಬೀಜದ ಕಷಾಯ ಸಿಂಪರಣೆ, ಲಿಂಗಾಕರ್ಷಕ ಬಲೆಗಳ ಉಪಯೋಗ ಒಳಗೊಂಡಂತೆ ಸಮಗ್ರ ಪೀಡೆ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು.
ಬೀಜ ಮತ್ತು ರಾಸಾಯನಿಕ ಗೊಬ್ಬರಗಳನ್ನು ಏಕಕಾಲಕ್ಕೆ ಬಿತ್ತುವ ಕೂರಿಗೆಯಿಂದ 30 ಸೆಂ. ಮೀ. ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡುವುದು ಸೂಕ್ತ. ಒಣ ಬೇಸಾಯದಲ್ಲಿ 45 ಸೆಂ ಮೀ. ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಬೇಕು. ಬಿತ್ತನೆಗೆ ಮೊದಲು ಬರ ನಿರೋಧಕತೆ ಹೆಚ್ಚಿಸಲು ಬೀಜವನ್ನು ಶೇ. 2 ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 30 ನಿಮಿಷ ಅಥವಾ ಶೇ. 25 ರ ಗೋಮೂತ್ರದಲ್ಲಿ 8 ಗಂಟೆಗಳ ಕಾಲ ನೆನೆಸಿ, ಕನಿಷ್ಠ 7 ಗಂಟೆ ನೆರಳಿನಲ್ಲಿ ಒಣಗಿಸಿ ಕಠಿಣಗೊಳಿಸಿ ನಂತರ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಅಣುಜೀವಿಯಿಂದ ಉಪಚರಿಸಬೇಕು. ಪ್ರತಿ ಕಿ.ಗ್ರಾಂ. ಬೀಜಕ್ಕೆ 4 ಮಿ.ಲೀ. ಜೈವಿಕ ಗೊಬ್ಬರ ಅಣುಜೀವಿ ಮಿಶ್ರಣವನ್ನು ಉಪಚರಿಸಿ ಬಿತ್ತನೆ ಮಾಡಿದ 30 ಮತ್ತು 45 ದಿನಗಳ ನಂತರ 1 ಲೀ. ನೀರಿನಲ್ಲಿ 40 ಮಿ.ಲೀ. ಅಣುಜೀವಿ ಮಿಶ್ರಣವನ್ನು ಸಿಂಪರಿಸಬೇಕು.
ಹಿಂದೂಸ್ತಾನ್ ಸಮಾಚಾರ್ / lalita MP