

ಕೊಪ್ಪಳ, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಯೋಡಿನ್ ಅಂಶವು ಮನುಷ್ಯನ ದೈಹಿಕ, ಮಾನಸಿಕ, ಬೆಳವಣಿಗೆಗೆ ಅತೀ ಅವಶ್ಯಕವಾಗಿದ್ದು, ಮನುಷ್ಯನ ಬುದ್ದಿಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಆಹಾರದಲ್ಲಿ ಅಯೋಡಿನ್ ಅಂಶವಿರುವ ಉಪ್ಪನ್ನೇ ಬಳಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಭಾಗ್ಯನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕೇಂದ್ರದ ವ್ಯಾಪ್ತಿಯ ಹಲಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟಿಯ ಅಯೋಡಿನ್ ಕೊರತೆಯ ನ್ಯೂನ್ಯತೆ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮನುಷ್ಯನಿಗೆ ಬದುಕಲು ಮುಖ್ಯವಾಗಿ ನೀರು, ಗಾಳಿ ಹಾಗೂ ಆಹಾರ ಅತ್ಯಂತ ಅವಶ್ಯಕ. ಅದರಂತೆ ಪೌಷ್ಠಿಕ ಆಹಾರ ಸೇವಿಸುವುದರ ಜೊತೆಗೆ ಅಯೋಡಿನ್ ಅಂಶವಿರುವ ಉಪ್ಪನ್ನೇ ಬಳಸಬೇಕು. ಇದು ಮನುಷ್ಯನ ದೈಹಿಕ, ಮಾನಸಿಕ, ಬೆಳವಣಿಗೆ ಅತಿ ಅವಶ್ಯಕವಾಗಿದ್ದು, ಮನುಷ್ಯನ ಬುದ್ದಿಮಟ್ಟ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಅಯೋಡಿನ್ ಅಂಶ ಮುಖ್ಯವಾಗಿ ಗಜ್ಜರಿ, ಮೀನು, ಸಮುದ್ರಕಳೆ, ಸಿಗಡಿಮೀನು ಇವುಗಳಲ್ಲಿ ಹೆಚ್ಚಾಗಿ ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದಿನನಿತ್ಯ ಅಯೋಡಿನ್‌ಯುಕ್ತ ಆಹಾರವನ್ನೇ ಬಳಸಬೇಕು ಎಂದು ಹೇಳಿದರು.
ವಿಶೇಷವಾಗಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಮಕ್ಕಳು ಹಾಗೂ ಹದಿ-ಹರೆಯದವರು ಕಡ್ಡಾಯವಾಗಿ ಅಯೋಡಿನ್ ಉಪ್ಪನ್ನೇ ಉಪಯೋಗಿಸಬೇಕು. ಅಯೋಡಿನ್ ಅಂಶವಿರುವ ಉಪ್ಪನ್ನು ಬಳಸದಿದ್ದರೆ ಗರ್ಭಿಣಿಯರಲ್ಲಿ ಪದೇ ಪದೇ ಗರ್ಭಪಾತ, ವಯಸ್ಕರಲ್ಲಿ ನಿಶಕ್ತಿ, ಗಳಗಂಡರೋಗ ಮುಂತಾದ ಕಾಯಿಲೆಗಳು ಉಂಟಾಗುತ್ತದೆ. ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಕುಂಠಿತ ಬೆಳವಣಿಗೆ, ಕಿವುಡ ಹಾಗೂ ಮೂಕತನ, ಕುಬ್ಜತನ ಕಂಡುಬರುತ್ತದೆ. ಆದ್ದರಿಂದ ಎಲ್ಲಾ ಗುಂಪಿನವರು ಕಡ್ಡಾಯವಾಗಿ ಅಯೋಡಿನ್ ಉಪ್ಪನ್ನೇ ಬಳಸಬೇಕು ಎಂದು ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೀಲಾ ಅವರು ಮಾತನಾಡಿ, ಬಾಲ್ಯವಿವಾಹ ನಿಷೇಧ, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಕೈತೊಳೆಯುವ ವಿಧಾನಗಳ ಬಗ್ಗೆ ವಿವರವಾಗಿ ತಿಳಿಸಿದರು.
ಹಲಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ವಿರೇಶ ಜಿ.ಕೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಇಂದಿನ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಅದರ ಜೊತೆಗೆ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಗ್ರಾಮಗಳಲ್ಲಿ, ವಾರ್ಡ್ಗಳಲ್ಲಿ ಹಾಗೂ ಸುತ್ತ್ತ ಮುತ್ತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತವರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಲಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹ ಉಪನ್ಯಾಸಕರಾದ ಡಾ.ಸುಮತಿ, ಶರಣಬಸವರಾಜ, ಶರಣಪ್ಪ ಮಾಗಳದ, ಶರೀಫಾ ಬೇಗಂ, ಸಿದ್ದರೆಡ್ಡಿ ಮೇಟಿ, ಕೊಟ್ರಪ್ಪ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್