



ಕೊಪ್ಪಳ, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬಾಲ ಕಾರ್ಮಿಕ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸದಸ್ಯರ ತಂಡವು ಜಿಲ್ಲೆಯ ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ, ತಪಾಸಣೆ ನಡೆಸಿತು. ತಪಾಸಣೆ ವೇಳೆ ಪತ್ತೆಯಾದ ಬಾಲ ಕಾರ್ಮಿಕ, ಕಿಶೋರ ಕಾರ್ಮಿಕರನ್ನು ಸೂಕ್ತ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು.
ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೊಪ್ಪಳ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಾರ್ಮಿಕ ದಾಳಿ, ತಪಾಸಣೆಗಳನ್ನು ಕೈಗೊಳ್ಳಲು ಸೂಚಿಸಿದ್ದರು. ಅದರಂತೆ ಸಮಿತಿ ಸದಸ್ಯರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ತಪಾಸಣೆಯನ್ನು ಕೈಗೊಳ್ಳಲಾಯಿತು. ಈ ಸಂದರ್ಭ ಗಿಣಿಗೇರಾ ಸುತ್ತಮುತ್ತ ಇರುವ ಇಟ್ಟಂಗಿ ಭಟ್ಟಿಗಳು ಕಾರ್ಯ ನಿರ್ವಹಿಸುತ್ತಿಲ್ಲವಾದ್ದರಿಂದ ಯಾವುದೇ ಮಕ್ಕಳು ಕೆಲಸ ನಿರ್ವಹಿಸುವುದು ಕಂಡು ಬಂದಿರುವುದಿಲ್ಲ.
ಹಾಗೂ ರಸ್ತೆಯ ಅಕ್ಕ-ಪಕ್ಕದಲ್ಲಿರುವ ಹೋಟೆಲ್, ಡಾಬಾಗಳನ್ನು ಪರಿಶೀಲಿಸಲಾಗಿ ಗಂಗಾವತಿ ರಸ್ತೆ ಬಳಿ ಇರುವ ಪ್ರಶಾಂತ್ ಡಾಬಾದಲ್ಲ್ಲಿ ಒಂದು ಕಿಶೋರ ಕಾರ್ಮಿಕ ಮಗು ಪತ್ತೆಯಾಗಿದ್ದು, ಡಾಬಾದ ಮಾಲೀಕರು ಕುಟುಂಬಸ್ಥರಾಗಿದ್ದರಿ0ದ ಮಾಲೀಕರಿಗೆ ತಿಳುವಳಿಕೆ ಹೇಳಿ ಬಾಲಕಾರ್ಮಿಕ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲಾಯಿತು.
ತಪಾಸಣೆಯಲ್ಲಿ ಕಾರ್ಮಿಕ ನಿರೀಕ್ಷಕರು, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರು, ಕೃಷಿ ಇಲಾಖೆ, ಮಕ್ಕಳ ಸಹಾಯವಾಣಿ-1098, ನಗರ ಸಭೆ, ಪೊಲೀಸ್ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
ಅಕ್ಟೋಬರ್ 24 ರಂದು ಕೊಪ್ಪಳ ನಗರ ಪ್ರದೇಶದಲ್ಲಿ ಬಾಲಕಾರ್ಮಿಕ/ಕಿಶೋರ ಕಾರ್ಮಿಕ ದಾಳಿ, ತಪಾಸಣೆಯನ್ನು ಕೈಗೊಳ್ಳಲಾಯಿತು. ಬಾಲಕಾರ್ಮಿಕ ತಪಾಸಣೆ ತಂಡವು ನಗರದ ವಿವಿಧ ವಾಣಿಜ್ಯ ಸಂಸ್ಥೆಗಳನ್ನು ಪರಿಶೀಲಿಸಿದಾಗ ಯಾವುದೇ ಮಕ್ಕಳು ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿರುವುದಿಲ್ಲ. ಸಂಸ್ಥೆಯ ಮಾಲೀಕರುಗಳಿಗೆ ಹಾಗೂ ಸಾರ್ವಜನಿಕರಿಗೆ ಬಾಲಕಾರ್ಮಿಕ ಕಾಯ್ದೆಯ ಕುರಿತು ಕರಪತ್ರಗಳನ್ನು ಮತ್ತು ಬಿತ್ತಿಪತ್ರಗಳನ್ನು ವಿತರಿಸುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ಭೀಮನೂರು ರಸ್ತೆ, ಗಿಣಿಗೇರಾ ಬಳಿ ಇರುವ ಶ್ರೀ ಹುಲಿಗೆಮ್ಮ ಇಂಡಸ್ಟಿಸ್ ಎಂಬ ಕಾರ್ಖಾನೆಯಲ್ಲಿ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ತಪಾಸಣೆಯಲ್ಲಿ ಒಂದು ಹೊರ ರಾಜ್ಯದ (ಅಸ್ಸಾಂ) ರಾಜ್ಯದ ಸುಮಾರು 17 ವರ್ಷದ ಒಬ್ಬ ಕಿಶೋರ ಕಾರ್ಮಿಕ ಮಗು ಕೆಲಸ ನಿರ್ವಹಿಸುತ್ತಿರುವುದು ಹಾಗೂ ಅಲ್ಲಾ ನಗರ ರಸ್ತೆ ಗಿಣಿಗೇರಾ ಬಳಿ ಇರುವ ಎಸ್.ಆರ್.ಎಸ್ ಕೆಮಿಕಲ್ಸ್ ಕಾರ್ಖಾನೆ ಆವರಣದಲ್ಲಿ ಬಿಹಾರ ರಾಜ್ಯದ ಸುಮಾರು 14 ವರ್ಷ ಹಾಗೂ ಸುಮಾರು 16 ವರ್ಷದ ಇಬ್ಬರು ಮಕ್ಕಳು ಪತ್ತೆಯಾಗಿದ್ದು, ಮಕ್ಕಳನ್ನು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸುವುದರ ಮೂಲಕ ಪುನರ್ವಸತಿಗೊಳಿಸಲಾಯಿತು. ಹಾಗೂ ಮಕ್ಕಳ ಕಲ್ಯಾಣ ಸಮಿತಿ ಪ್ರಕ್ರಿಯೆ ಮುಗಿದ ನಂತರ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.
ಈ ತಪಾಸಣೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರು ಬಸವರಾಜ ಹಿರೇಗೌಡ್ರ, ಕಾರ್ಮಿಕ ನಿರೀಕ್ಷಕರಾದ ಮಂಜುಳಾ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಬಸವರಾಜ, ಕೃಷಿ ಇಲಾಖೆಯ ಶರಣಬಸಪ್ಪ, ಕೆಪಿಟಿಸಿಎಲ್ ಅಸಿಸ್ಟಂಟ್ ಇಂಜಿನಿಯರ್ ಪವನ ಹಾಗೂ ಮಕ್ಕಳ ಸಹಾಯವಾಣಿ-1098 ಸಿಬ್ಬಂದಿ ಬಸವರಾಜ ಗುಳೇದ, ಸ್ಪಂದನಾ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್