
ಗದಗ, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರ ನರೇಗಾ ಯೋಜನೆಯ ಕೂಲಿಕಾರರಿಗೆ ಇ-ಕೆವೈಸಿ ಕಡ್ಡಾಯಗೊಳಿಸಿದೆ. ತಾಲೂಕಿನ 13 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರರಿಗೆ ಇ-ಕೆವೈಸಿ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ತಾಲೂಕಿನ ಎಲ್ಲ ನರೇಗಾ ಕೂಲಿಕಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವಾದ್ದಲ್ಲಿ ನರೇಗಾ ಕೂಲಿಕಾರರ ಉದ್ಯೋಗ ಚೀಟಿ ರದ್ದುಗೊಳಿಸಲಾಗುವುದೆಂದು ತಾಲೂಕು ಪಂಚಾಯತ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರು ಬಸವರಾಜ ಬಡಿಗೇರ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ಅತೀ ಕಡಿಮೆ ಇ-ಕೆವೈಸಿ ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯತಿಗಳಾದ ಹಾಲಕೆರೆ ಮತ್ತು ಮಾರನಬಸರಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ನರೇಗಾ ಕೂಲಿಕಾರರ ಮನೆ-ಮನೆಗಳಿಗೆ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಿದರು.
ಹಾಲಕೆರೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಇ-ಕೆವೈಸಿ ಕಾರ್ಯ ಪರಿಶೀಲಿಸಿದ ಎಡಿ ಬಡಿಗೇರ್ ಅವರು, ಖುದ್ದು ಗ್ರಾಮದಲ್ಲಿ ಸಂಚರಿಸಿ ಕೂಲಿಕಾರರ ಮನೆಗಳಿಗೆ ಭೇಟಿ ನೀಡಿ ಇ-ಕೆವೈಸಿ ಕಾರ್ಯ ಮಾಡಿದರು. ಈ ವೇಳೆ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಿದ ಎಡಿ ಅವರು, ಅಕ್ಟೋಬರ್ 31 ರೊಳಗಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಬರುವುದಿಲ್ಲ ಎಂದರು.
ಮಾರನಬಸರಿ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಇ-ಕೆವೈಸಿ ಮಾಡುತ್ತಿರುವ ಸಿಬ್ಬಂದಿಗಳ ಜೊತೆ ಮಾತನಾಡಿ, ಬೆಳಿಗ್ಗೆ ಮತ್ತು ಸಾಯಂಕಾಲ ಸಂದರ್ಭದಲ್ಲಿ ನೆಟವರ್ಕ ಸಮಸ್ಯೆ ಇರುವುದಿಲ್ಲ. ಈ ವೇಳೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಒಂದಡೇ ಕೂಲಿಕಾರರನ್ನು ಸೇರಿಸಿಕೊಂಡು ಇ-ಕೆವೈಸಿ ಕಾರ್ಯ ಮಾಡಿ ಅಂತ ಸಲಹೆ ನೀಡಿದರು.
ಇನ್ನೂ ಗಜೇಂದ್ರಗಡ ತಾಲೂಕಿನಲ್ಲಿ ಒಟ್ಟು 37307 ನರೇಗಾ ಕೂಲಿಕಾರರು ಇದ್ದಾರೆ. ಈವರೆಗೂ 18198 ನರೇಗಾ ಕೂಲಿಕಾರರ ಇ-ಕೆವೈಸಿ ಕಾರ್ಯ ಪೂರ್ಣಗೊಂಡಿದೆ. ಬಾಕಿ 19109 ನರೇಗಾ ಕೂಲಿಕಾರರ ಇ-ಕೆವೈಸಿ ಕಾರ್ಯ ಉಳಿದುಕೊಂಡಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಮುಕ್ತಾಯಗೊಳಿಸುವಂತೆ ಸಂಬಂಧಿಸಿದ ಸಿಬ್ಬಂದಿಗಳಿಗೆ ವರ್ಚುವಲ್ ಸಭೆ ಮೂಲಕ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ, ಕಂದಕೂರ ಅವರು ತಾಕೀತು ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗಣಕಯಂತ್ರ ನಿರ್ವಾಹಕರು, ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಎಂಐಎಸ್ ಸಂಯೋಜಕರು, ಬಿಎಫ್ ಟಿ, ಗ್ರಾಮ ಕಾಯಕ ಮಿತ್ರರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP