

ರಾಯಚೂರು, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಕ್ಕಳ ಪಾಲಕರು ಜಾಗೃತರಾಗಿ ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ತಾಲೂಕುಮಟ್ಟದ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್ ಅವರು ಹೇಳಿದ್ದಾರೆ.
ನಗರದ ತಾಯ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ, ಕೃಷ್ಣ-ತುಂಗಾ ರಾಯಚೂರು, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಇವರ ಸಯುಂಕ್ತಾಶ್ರಯದಲ್ಲಿ ನಡೆದ ವಿಶ್ವ ಪೋಲಿಯೋ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಕಾರವು ಪೋಲಿಯೋ ನಿರ್ಮೂಲನೆಗೆ ಪಣತೊಟ್ಟ ದಿನದಿಂದಲೇ ಸಮಾಜಮುಖಿ ಸಂಸ್ಥೆ ರೋಟರಿ ಕ್ಲಬ್ ವಿಶ್ವ ಮಟ್ಟದಲ್ಲಿ ವ್ಯಾಪಕ ಪ್ರಚಾರ, ಸ್ವಯಂ ಸೇವಕರ ಸೇವೆ ಒದಗಿಸುವ ನಿರ್ಧಾರದಿಂದ ಪೋಲಿಯೋ ಮುಕ್ತ ಭಾರತದ ಕೊಡುಗೆಯಲ್ಲಿ ರೋಟರಿ ಕ್ಲಬ್ ಪಾತ್ರ ಮಹತ್ವಪೂರ್ಣವಾಗಿದೆ.
ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತೆ ರಾಜ್ಯ ಸರ್ಕಾರವು ಆರೋಗ್ಯ ಕ್ಷೇತ್ರದತ್ತ ಹೆಚ್ಚು ಒತ್ತು ನೀಡಿದೆ. ಯಾವುದೇ ಆಸ್ಪತ್ರೆಗಳಲ್ಲಿ ವ್ಶೆದ್ಯರ ಮತ್ತು ಸಿಬ್ಬಂದಿಯ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ವಿಶೇಷವಾಗಿ ತಾಯಿ ಮಕ್ಕಳ ಆರೋಗ್ಯದತ್ತ ನಾವು ಹೆಚ್ಚಿನ ಗಮನ ಕೊಡಬೇಕಿದೆ ಎಂದು ಅವರು ವ್ಶೆದ್ಯರಿಗೆ ಸಲಹೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಸುರೇಂದ್ರ ಬಾಬು ಅವರು ಮಾತನಾಡಿ, ಪೋಲಿಯೋ ವೈರಸ್ ದೇಹವನ್ನು ಪ್ರವೇಶಿಸಿ ಕೈಕಾಲುಗಳ ಬಲಹೀನತೆಗೆ ಕಾರಣವಾಗುವ ಪೋಲಿಯೋ ರೋಗವನ್ನು ಸಂಪೂರ್ಣವಾಗಿ ತಡೆಯಲು ಮಗುವಿಗೆ 5 ವರ್ಷ ತುಂಬುವುದರೊಳಗೆ 7 ಬಾರಿ ಪೋಲಿಯೋ ಲಸಿಕೆ ತಪ್ಪದೆ ಹಾಕಿಸಬೇಕೆಂದು ಮನವಿ ಮಾಡಿದರು.
1955ರಲ್ಲಿ ವಿಜ್ಞಾನಿ ಡಾ.ಜೋನಾಸ್ ಸಾಲ್ಕ್ ಅವರು ಅಭಿವೃದ್ದಿಪಡಿಸಿದ ಪೋಲಿಯೋ ಲಸಿಕೆಯನ್ನು 1995 ಡಿಸೆಂಬರ್‌ನಲ್ಲಿ ಭಾರತ ಸರಕಾರವು 05 ವರ್ಷದೊಳಗಿನ ಮಕ್ಕಳಿಗೆ ಬಾಯಿ ಮೂಲಕ ಎರಡು ಹನಿ ಪೋಲಿಯೋ ದ್ರಾವಣ ಹಾಕುವ ಪಲ್ಸ್ ಪೋಲಿಯೋ ಅಭಿಯಾನ ಆರಂಭಿಸಿದ ತರುವಾಯ 2011ರ ಜನವರಿಯಲ್ಲಿ ದೇಶದಲ್ಲಿ ಕೊನೆಯ ಪೋಲಿಯೋ ಪ್ರಕರಣದ ನಂತರ ಇಂದು ಕೋಟ್ಯಾಂತರ ಮಕ್ಕಳ ಬದುಕಿನಲ್ಲಿ ಅಂಗವೈಕಲ್ಯತೆಯನ್ನು ದೂರಮಾಡಿದ ಆಶಾಕೀರಣವಾಗಿದೆ. ಈ ದಿಶೆಯಲ್ಲಿ ಜಾಗತಿಕವಾಗಿ ಶೂನ್ಯ ಪೋಲಿಯೋ ಪ್ರಕರಣವಾಗಿಸಲು ಪಾಲಕರು ತಪ್ಪದೆ ಪೋಲಿಯೋ ಲಸಿಕೆ ಹಾಕಿಸಲು ಅವರು ವಿನಂತಿಸಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ ಎಮ್. ಎನ್ ಅವರು ಪ್ರಾಸ್ತಾವಿಕ ಮಾತನಾಡಿ, ಪೋಲಿಯೋ ರೋಗವನ್ನು ಪರಿಣಾಮಕಾರಿ ತಡೆಗೆ ಲಸಿಕೆಯನ್ಮ್ನ ಬಾಯಿ ಮೂಲಕವಲ್ಲದೆ ಚುಚ್ಚುಮದ್ದು ರೂಪದಲ್ಲಿ ಸಹ ನೀಡಲಾಗುತ್ತಿದೆ. ಇದರೊಂದಿಗೆ 12 ಮಾರಕ ರೋಗಗಳು ಬಾರದಂತೆ ನೋಡಿಕೊಳ್ಳಲು ಮಗುವಿಗೆ ಒಂದು ವರ್ಷದೊಳಗೆ ಪೂರ್ಣ ಲಸಿಕೆ ಹಾಗೂ ಎರಡು ವರ್ಷದೊಳಗೆ ಬೂಸ್ಟರ್ ಡೋಸ್ ರೂಪದಲ್ಲಿ ನೀಡುವ ಲಸಿಕೆ ತಪ್ಪದೆ ಹಾಕಲು ಜಿಲ್ಲೆಯಾದ್ಯಂತ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನಿರಂತರವಾಗಿ ಲಸಿಕೆ ಹಾಕಲಾಗುತ್ತಿದ್ದು, ಪಾಲಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ್ ಕೆ, ಆಡಳಿತ ವೈದ್ಯಾಧಿಕಾರಿ ಡಾ.ಪ್ರಜ್ವಲ್ ಕುಮಾರ್, ತಜ್ಞವೈದ್ಯರಾದ ಡಾ.ಅನುಷ್ಕಾ ಅಕುಲಾ, ಡಾ.ಇಮ್ರಾನ್ ಪರ್ವೇಜ್, ರೋಟರಿ ಸಂಸ್ಥೆಯ ಕಾರ್ಯದರ್ಶಿ ಅಂಬ್ರೇಶ್ ರೆಡ್ಡಿ, ಸಂಪತ್‌ಕುಮಾರ್, ಶಿವಕುಮಾರ್, ಮಂಜುನಾಥ್, ಡಿಹೆಚ್‌ಇಓ ಈಶ್ವರ ಹೆಚ್.ದಾಸಪ್ಪನವರ, ಡಿವೈಹೆಚ್‌ಇಓ ಬಸಯ್ಯ, ಹಿರಿಯ ಶುಶ್ರೂಷಣಾಧಿಕಾರಿ ಸೆಲೋಮಿ, ಬಿಹೆಚ್‌ಇಓ ಸರೋಜಾ ಕೆ, ಎಫ್‌ವಿಐ ಕೋಪ್ರೇಶ್ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್