ರಾಯಚೂರು : ಮಕ್ಕಳ ಸಹಾಯವಾಣಿ 1098 ಕರೆ - ಪೂರ್ಣ 215 ಪ್ರಕರಣಗಳು ವಿಲೆ
ರಾಯಚೂರು, 26 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ-1098 ಉತ್ತಮ ಕಾರ್ಯನಿರ್ವಹಣೆಯಾಗುತ್ತಿದೆ. ಇದರಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ತುರ್ತಾಗಿ ಸ್ಪಂದಿಸಲು ಹಾಗೂ ಅಗತ್ಯ ನೆರವು ನೀಡಲು ಅನುಕೂಲವಾಗಿದೆ. ಬಾಲ್ಯವಿವಾಹ, ಬಾಲಕಾರ್ಮಿಕ, ಭಿಕ್ಷಾಟನೆ
Raichur: Child helpline 1098 calls - 215 cases disposed of


ರಾಯಚೂರು, 26 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ-1098 ಉತ್ತಮ ಕಾರ್ಯನಿರ್ವಹಣೆಯಾಗುತ್ತಿದೆ. ಇದರಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ತುರ್ತಾಗಿ ಸ್ಪಂದಿಸಲು ಹಾಗೂ ಅಗತ್ಯ ನೆರವು ನೀಡಲು ಅನುಕೂಲವಾಗಿದೆ.

ಬಾಲ್ಯವಿವಾಹ, ಬಾಲಕಾರ್ಮಿಕ, ಭಿಕ್ಷಾಟನೆ, ಕಾಣೆಯಾದ ಮಕ್ಕಳು, ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಆಪ್ತ ಸಮಾಲೋಚನೆಗೆ 2024-25ನೇ ಸಾಲಿನಲ್ಲಿ ಜನವರಿ ಮಾಹೆಯಿಂದ ಡಿಸೆಂಬರ್ ಮಾಹೆವರೆಗೆ ಒಟ್ಟು 215 ಪ್ರಕರಣಗಳು ದಾಖಲಾಗಿದ್ದು, ದಾಖಲಾದ ಎಲ್ಲ ಪ್ರಕರಣಗಳನ್ನು ವಿಲೇ ಮಾಡಲಾಗಿದೆ.

ರಾಯಚೂರು ಜಿಲ್ಲೆಯಾದ್ಯಂತ ಬಾಲ್ಯವಿವಾಹ ತಡೆಗೆ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ವಹಿಸಿದೆ. ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕಾಂದೂ ಅವರು ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಕಾಲಕಾಲಕ್ಕೆ ಸಭೆ ನಡೆಸಿ ವಿಶೇಷವಾಗಿ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ತಡೆ ಕ್ರಮಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕ್ರಮವಹಿಸಿದ್ದಾರೆ. ಇದರಿಂದಾಗಿ 2024-25ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳನ್ನು ಶೂನ್ಯಕ್ಕಿಳಿಸಿ ಉತ್ತಮ ಸಾಧನೆ ತೋರಲಾಗಿದೆ.

ಬಾಲ್ಯವಿವಾಹವು ನಮ್ಮ ಸಮಾಜಕ್ಕೆ ಅಂಟಿದ ಕಳಂಕವಾಗಿದೆ. ರಾಯಚೂರು ಜಿಲ್ಲೆಯ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡುತ್ತಿದೆ. ಬಾಲ್ಯವಿವಾಹ ತಪ್ಪು ಎಂಬುದು ಶಾಲಾ-ಕಾಲೇಜು ಮಕ್ಕಳಿಗೆ ಅರಿವಿಗೆ ಬರುತ್ತಿದೆ. ಬಾಲ್ಯವಿವಾಹಕ್ಕೆ ಮಕ್ಕಳ ಸಹಾಯವಾಣಿ-1098ಗೆ 2024-25ನೇ ಸಾಲಿನಲ್ಲಿ ರಾಯಚೂರು ತಾಲೂಕಿನಿಂದ 22, ಮಾನವಿ ತಾಲೂಕಿನಿಂದ 16, ಸಿರವಾರ ತಾಲೂಕಿನಿಂದ 9, ದೇವದುರ್ಗ ತಾಲೂಕಿನಿಂದ 31, ಸಿಂಧನೂರ ತಾಲೂಕಿನಿಂದ 12, ಲಿಂಗಸೂರ ತಾಲೂಕಿನಿಂದ 20 ಹಾಗೂ ಮಸ್ಕಿ ತಾಲೂಕಿನಿಂದ 16 ಕರೆಗಳು ಸ್ವೀಕೃತವಾಗಿದ್ದು, ಸಂಬAಧಿಸಿದ ಅಧಿಕಾರಿಗಳು ತುರ್ತು ಕ್ರಮವಹಿಸಿ ದಾಖಲಾದ ಎಲ್ಲಾ 126 ಪ್ರಕರಣಗಳನ್ನು ಯಶಸ್ವಿಯಾಗಿ ವಿಲೆಗೊಳಿಸಿದ್ದಾರೆ.

ಬಾಲ ಕಾರ್ಮಿಕ ಪ್ರಕರಣಗಳಿಗೆ ಮಕ್ಕಳ ಸಹಾಯವಾಣಿ-1098ಗೆ 2024-25ನೇ ಸಾಲಿನಲ್ಲಿ ರಾಯಚೂರು ತಾಲೂಕಿನಿಂದ 19, ದೇವದುರ್ಗ ತಾಲೂಕಿನಿಂದ 5, ಸಿರವಾರ ಮತ್ತು ಸಿಂಧನೂರ ತಾಲೂಕುಗಳಿಂದ ತಲಾ 2 ಮತ್ತು ಮಾನವಿ ಮತ್ತು ಲಿಂಗಸೂರ ತಾಲೂಕಿನಿಂದ ತಲಾ 1 ಪ್ರಕರಣಗಳು ದಾಖಲಾಗಿದ್ದು, ಎಲ್ಲಾ 30 ಪ್ರಕರಣಗಳನ್ನು ವಿಲೆಗೊಳಿಸಲಾಗಿದೆ. 2024-25ನೇ ಸಾಲಿನಲ್ಲಿ ಸಿರವಾರ, ದೇವದುರ್ಗ ಮತ್ತು ಮಸ್ಕಿ ತಾಲೂಕುಗಳು ಭಿಕ್ಷಾಟನೆ ಮುಕ್ತ ತಾಲೂಕುಗಳಾಗಿ ಗುರುತಿಸಿಕೊಂಡಿವೆ. ಮಕ್ಕಳ ಕಾಣೆಗೆ ರಾಯಚೂರು ತಾಲೂಕು ಮತ್ತು ಸಿಂಧನೂರ ತಾಲೂಕಿನಿಂದ ತಲಾ 5 ಕರೆಗಳು, ಲಿಂಗಸೂರಿನಿ0ದ 2 ಹಾಗೂ ದೇವದುರ್ಗ ಮತ್ತು ಮಸ್ಕಿ ತಾಲೂಕಿನಿಂದ ತಲಾ 1 ಸೇರಿ ದಾಖಲಾದ 14 ಮಕ್ಕಳ ಕಾಣೆ ಕರೆಗಳಿಗೆ ಸ್ಪಂದನೆ ನೀಡಿ ಎಲ್ಲ ಪ್ರಕರಣಗಳನ್ನು ವಿಲೆಗೊಳಿಸಲಾಗಿದೆ.

2024-25ನೇ ಸಾಲಿನಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬ0ಧಿಸಿದ ಅತಿ ಹೆಚ್ಚು 10 ಕರೆಗಳು ರಾಯಚೂರು ತಾಲೂಕಿನಿಂದಲೇ ದಾಖಲಾಗಿವೆ. ದೇವದುರ್ಗ ತಾಲೂಕಿನಿಂದ 5 ಕರೆಗಳು, ಸಿಂಧನೂರ ಮತ್ತು ಲಿಂಗಸೂಗು ತಾಲೂಕಿನಿಂದ ತಲಾ 4 ಕರೆಗಳು ಹಾಗೂ ಮಾನವಿ ತಾಲೂಕಿನಿಂದ 2 ಕರೆಗಳು ಸ್ವೀಕೃತವಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಉತ್ತಮ ಕಾರ್ಯನಿರ್ವಹಣೆ ತೋರಿ ದಾಖಲಾದ ಎಲ್ಲಾ 27 ಪ್ರಕರಣಗಳನ್ನು ವಿಲೆಗೊಳಿಸಲಾಗಿದೆ.

ಆಪ್ತ ಸಮಾಲೋಚನೆಗೆ ರಾಯಚೂರು ತಾಲೂಕಿನಿಂದ 5 ಕರೆಗಳು ಮತ್ತು ಸಿರವಾರ, ದೇವದುರ್ಗ ಹಾಗೂ ಲಿಂಗಸೂರು ತಾಲೂಕಿನಿಂದ ತಲಾ 1 ಕರೆಗಳು ಬಂದಿದ್ದು, ಎಲ್ಲ 8 ಕರೆಗಳಿಗೆ ಸ್ಪಂದಿಸಿ ವಿಲಗೊಳಿಸಲಾಗಿದೆ.

ಶಾಶ್ವತ ಫಲಕದಲ್ಲಿ ಪ್ರದರ್ಶಿಸಲು ಸೂಚನೆ: ಮಕ್ಕಳ ಗುರುತಿಸುವಿಕೆ, ಸಂಕಷ್ಟ ಸ್ಥಿತಿಯಲ್ಲಿ ಮಾಹಿತಿ ಹಂಚಿಕೊಳ್ಳಲು ಹಾಗೂ ಪುನರ್ ವಸತಿ ಸೇವೆ ಕಲ್ಪಿಸುವಲ್ಲಿ ಮಕ್ಕಳ ಸಹಾಯವಾಣಿ 1098 ಮಹತ್ವದ ಪಾತ್ರ ವಹಿಸುತ್ತದೆ. ಈ ಸಂಖ್ಯೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕತೆ ಸಂಕಷ್ಟದಲ್ಲಿನ ಮಕ್ಕಳ ರಕ್ಷಣೆ ಸೇರಿದಂತೆ ವಿವಿಧ ರೀತಿಯ ಮಕ್ಕಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸೇವಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098ನ್ನು ಕಡ್ಡಾಯವಾಗಿ ಶಾಶ್ವತ ಫಲಕದಲ್ಲಿ ಪ್ರದರ್ಶಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ ಅವರು ಇತ್ತೀಚೆಗಷ್ಟೇ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸಂಕಷ್ಟದಲ್ಲಿನ ಮಕ್ಕಳ ಹಿತರಕ್ಷಣೆಗೆ ಒತ್ತು: ಮಕ್ಕಳ ಕಲ್ಯಾಣ ಮತ್ತು ಸುರಕ್ಷತೆಯನ್ನು ಬೆಂಬಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಿಷನ್ ವಾತ್ಸಲ್ಯ ಯೋಜನೆ ಜಾರಿ ತಂದಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅನುಷ್ಠಾನಗೊಂಡಿರುವ ಮಿಷನ್ ವಾತ್ಸಲ್ಯ ಯೋಜನೆಯು ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆಯ ಆದ್ಯತೆಯನ್ನು ಸಾಧಿಸುವ ಒಂದು ಮಾರ್ಗವಾಗಿದೆ. ಸಂಕಷ್ಟದಲ್ಲಿನ ಹಾಗೂ ಸವಾಲಿನಲ್ಲಿರುವ ಮಕ್ಕಳ ಹಿತರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande