
ಗದಗ, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತೀಯರಿಗೆ ಅಡುಗೆ ಮನೆಯೇ ಔಷಧಾಲಯ ಇದ್ದಂತೆ. ನಾವು ಪ್ರತಿದಿನ ಸೇವಿಸುವ ಆಹಾರ-ಪದಾರ್ಥಗಳಲ್ಲಿ ಔಷಧೀಯ ಗುಣಗಳಿವೆ. ನಾವು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ನರಗುಂದ ತಾಲೂಕು ವಾಸನ ಗ್ರಾಮದ ಪಾರಂಪರಿಕ ವೈದ್ಯ ಹನಮಂತ ಮಳಲಿ ಹೇಳಿದರು.
ಗದಗ ಜಿಲ್ಲೆಯ ಲಕ್ಷೇಶ್ವರ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು. ಉಪ್ಪು, ಹುಳಿ, ಖಾರ, ವಗರು, ಕಹಿ ಸೇವಿಸದೇ ಇರುವುದರಿಂದ ಹಾಗೂ ಅರಿಷಡ್ವರ್ಗಗಳು ಅಂದರೆ ಆರು ವೈರಿಗಳಾದ ಕಾಮ, ಕ್ರೋಧ, ಲೋಭ, ಮದ, ಮತ್ಸರ ಮತ್ತು ಮೋಹಗಳು ಹೆಚ್ಚಾಗುವುದರಿಂದ ಖಂಡಿತವಾಗಿ ನಮ್ಮ ದೇಹಕ್ಕೆ ರೋಗ ಆಂಟಿಕೊಳ್ಳುತ್ತದೆ ಎಂಬುದನ್ನು ಯಾರೂ ಮರೆಯಬಾರದು.
ಒಳ್ಳೆ ವಿಚಾರ ಮಾಡುವವರು ಹಾಗೂ ಯಾವಾಗಲೂ ನಗುತ್ತ ಇರುವವರಿಗೆ ಯಾವುದೇ ರೋಗ ಬರುವುದಿಲ್ಲ ಎಂದು ಹೇಳಿದ ಅವರು, ಈ ಮೊದಲು ಭಾರತೀಯರಿಗೆ ರೋಗ ಎನ್ನುವುದೇ ಗೊತ್ತಿರಲಿಲ್ಲ. ನೈಸರ್ಗಿಕವಾಗಿ ದೊರೆಯುತ್ತಿದ್ದ ವಸ್ತುಗಳನ್ನು ಆಹಾರದಲ್ಲಿ ಬಳಸುತ್ತಿರುವುದೇ ಇದಕ್ಕೆ ಕಾರಣವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ-ವಿಹಾರ ಪದ್ಧತಿಗಳು ಬೇರೆ ಆಗಿವೆ. ಹೀಗಾಗಿ ನಾವು ಆಗಾಗ ರೋಗಗಳಿಂದ ಬಳಲಬೇಕಾಗಿದೆ. ಪ್ರಕೃತಿಯಲ್ಲಿ 21 ಲಕ್ಷ ಔಷಧೀಯ ಸಸ್ಯಗಳಿವೆ ಎಂದು ತಿಳಿಸಿದರು.
ನಮ್ಮ ಎಲ್ಲ ರೋಗಗಳಿಗೆ ಅಪಚನವೇ ಮುಖ್ಯ ಕಾರಣ. ಆದ್ದರಿಂದ ಹಸಿವು ಇದ್ದಾಗ ಮಾತ್ರ ಊಟ ಮಾಡವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಪ್ರತಿದಿನ ಯಾವುದೇ ರೂಪದಲ್ಲಾದರೂ ನಾಲ್ಕು ಕಾಳು ಮೆಣಸು, ಅರ್ಧ ಲಿಂಬೆಹಣ್ಣು ಮತ್ತು ತುಳಸಿಯನ್ನು ಸೇವಿಸಿದರೆ ನಾವು ಸದಾ ಆರೋಗ್ಯವಾಗಿ ಇರುತ್ತೇವೆ ಎಂದು ಹನಮಂತ ಮಳಲಿ ಹೇಳಿದರು.
ನೌಕರರ ಸಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಮಾತನಾಡಿ, ಹಿರಿಯ ನಾಗರಿಕ ಅನುಕೂಲಕ್ಕಾಗಿ ಸಂಘದ ವತಿಯಿಂದ ಹತ್ತು ಹಲವು ಉಪಯುಕ್ತ ಕಾರ್ಯಕ್ರಮಕಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದರೊಂದಿಗೆ ಹಿರಿಯ ನಾಗರಿಕ ಸಮಸ್ಯೆಗಳ ಪರಿಹಾರಕ್ಕೂ ಸಂಘದ ವತಿಯಿಂದ ಹೋರಾಟ ಮಾಡಲಾಗುವುದು, ಕಾರಣ ಹಿರಿಯರು ಯಾವುದೇ ಕಾರಣಕ್ಕೂ ಚಿಂತೆ ಮಾಡುವ ಅಗತ್ಯ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರುವ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಂಬಣ್ಣ ಬಾಳಿಕಾಯಿ, ಚನ್ನಪ್ಪ ಕೋಲಕಾರ, ಐ.ಎಸ್. ಮಡಿವಾಳರ, ಹೇಮಗಿರಿಮಠ, ರೇವಣಸಿದ್ದಯ್ಯ ಬಾಳೆಹಳ್ಳಿಮಠ, ಡಿ.ಬಿ. ಬಳಿಗಾರ, ನೀಲಪ್ಪ ಕರ್ಜೆಕಣ್ಣವರ, ಪ್ರಕಾಶ ಉಪನಾಳ, ಸುರೇಶ ರಾಚನಾಯಕರ, ಎಸ್.ಸಿ. ಅಳಗವಾಡಿ, ಪಾರವ್ವ ಧರಣಿ ಸೇರಿದಂತೆ ಮತ್ತಿತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP