
ಗದಗ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಯುವ ಜನಾಂಗಕ್ಕೆ ಯುವಜನೋತ್ಸವ ಕೇವಲ ಮೋಜು ಮಸ್ತಿಗಾಗಿ ಮಾತ್ರವಲ್ಲ, ಅದು ಅವರ ಉಜ್ವಲ ಭವಿಷ್ಯದ ಸೂಚಕ ಹಾಗೂ ಜೀವನ ಮೌಲ್ಯಗಳಿಗೆ ದಾರಿ ದೀಪವಾಗಬಲ್ಲದು ಎಂಬುದನ್ನು ಸಮಕಾಲೀನ ಯುವಪೀಳಿಗೆ ಅರ್ಥೈಸಿಕೊಂಡಾಗ ಈ ಯುವಜನೋತ್ಸವಕ್ಕೆ ಒಂದು ಸಾರ್ಥಕ್ಯ ಬರಲು ಸಾಧ್ಯ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ, ನಿಮ್ಹಾನ್ಸ್, ಬೆಂಗಳೂರು, ನೆಹರು ಯುವ ಕೇಂದ್ರ, ಗದಗ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಗದಗ, ಲಯನ್ಸ್ ಶಿಕ್ಷಣ ಸಂಸ್ಥೆ, ಗದಗ, ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿಂದು ಸನ್ಮಾರ್ಗ ಕಾಲೇಜಿನಲ್ಲಿ ಜರುಗಿದ 2025ನೇ ಸಾಲಿನ ಯುವಜನೋತ್ಸವವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡಿದರು.
ಜಿಲ್ಲೆಯಲ್ಲಿ ಯುವಕ ಮಂಡಳಗಳ ಸಂಖ್ಯೆಯನ್ನು ಹೆಚ್ಚಿಸುವ, ಹಾಗೆಯೇ ಅವುಗಳ ಮೂಲಕ ರಚನಾತ್ಮಕ ಚಟುವಟಿಕೆಗಳನ್ನು ಮಾಡುವ ಉದ್ದೇಶ ತಮಗಿದೆ. ಅದನ್ನು ಸಾರ್ಥಕಪಡಿಸುವಲ್ಲಿ ಯುವಜನ ಸಬಲೀಕರಣ ಇಲಾಖೆ ಪ್ರಯತ್ನ ಮಾಡಲಿ ಎಂದು ಆಶಿಸಿದರು.
ಹಾಗೆಯೇ ಭವ್ಯ ಭಾರತವನ್ನು ರೂಪಿಸುವ ಯುವಜನಾಂಗ ಮಾದಕ ವಸ್ತುಗಳತ್ತ ಆಕರ್ಷಿತರಾಗದೇ ಸನ್ಮಾರ್ಗದಲ್ಲಿ ನಡೆದಾಗ ಅವರ ಉಜ್ವಲ ಭವಿಷ್ಯ ಹಾಗೂ ರಾಷ್ಟ್ರದ ಉತ್ಥಾನ ಸುಲಭ ಸಾಧ್ಯ ಎನ್ನುವ ತಮ್ಮ ಅಭಿಪ್ರಾಯಕ್ಕೆ ಸಾಕಷ್ಟು ಅಂಕಿ ಅಂಶಗಳನ್ನು ನೀಡುವ ಮೂಲಕ ಯುವಜನರ ಮನವನ್ನು ಪರಿವರ್ತಿಸುವ ಸಫಲ ಪ್ರಯತ್ನಗೈದರು. ಜೊತೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸ್ಪರ್ಧಾಳುಗಳು ತಮ್ಮ ತಮ್ಮ ವಿಭಾಗಗಳಲ್ಲಿ ಯಶಸ್ಸನ್ನು ಪಡೆಯಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಜಿಲ್ಲಾಧ್ಯಕ್ಷ ರವಿಕಾಂತ ಅಂಗಡಿ, ಯುವ ಕಲಾವಿದರಿಗೆ ಸೂಕ್ತ ಗೌರವ ಪ್ರಶಸ್ತಿಗಳನ್ನು ದೊರಕಿಸಿ ಕೊಡುವಲ್ಲಿ ಸಚಿವರ ಸಹಾಯವನ್ನು ಆಪೇಕ್ಷಿಸುವುದರ ಜೊತೆಗೆ ಸಚಿವರ ಮಾರ್ಗದರ್ಶನ, ನಮ್ಮ ಸಮಾರಂಭಕ್ಕೆ ಅತ್ಯಂತ ಅಗತ್ಯ. ಆ ರೀತಿಯ ಸಹಾಯ, ಸಹಕಾರ ಯಾವತ್ತೂ ಇರಲಿ ಎಂದು ಆಶಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ. ಬಿ. ಅಸೂಟಿ, ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಲಯನ್ಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಜೆ.ಸಿ ಶಿರೋಳ, ಸಿದ್ದು ಪಾಟೀಲ, ಸಾವಿತ್ರಿ ಲಮಾಣಿ, ಶಂಕ್ರಣ್ಣ ಸಂಕಣ್ಣನವರ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಗಣ್ಯರಾದ ರಾಜೇಶ ಕುಲಕರ್ಣಿ, ಎಮ್. ಸಿ. ಹಿರೇಮಠ, ಪ್ರೇಮಾನಂದ ರೋಣದ, ಸಯ್ಯದ ಮತೀನ್ ಮುಲ್ಲಾ, ರೋಹಿತ ಒಡೆಯರ, ರಾಹುಲ್ ಒಡೆಯರ, ಪುನೀತ ದೇಶಪಾಂಡೆ, ಶ್ರೀಮತಿ ಜಿ.ಬಿ. ಬೇವಿನಕಟ್ಟಿ, ರಾಜು ವರ್ಣೆಕರ, ರೇಣಕಾಪ್ರಸಾದ ಹಿರೇಮಠ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಅಂದಾನಯ್ಯ ವಿಭೂತಿ, ಎಚ್ ಎಸ್ ಸೋಂಪುರ, ಸಿದ್ದಣ್ಣ ಬಂಡಿ, ಹಬೀಬ್ ಹಾಜರಿದ್ದರು.
ಮಹಮ್ಮದ ರಫೀ ಯರಗುಡಿ ಕಾರ್ಯಕ್ರಮ ನಿರೂಪಿಸಿದರೆ, ಡಾ. ಶರಣು ಗೋಗೇರಿ ಸ್ವಾಗತಿಸಿದರು. ಪ್ರೊ. ಹೇಮಂತ ದಳವಾಯಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP