


ಹೊಸಪೇಟೆ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಲೋಕಸಭಾ ಕ್ಷೇತ್ರದ ಸದಸ್ಯ ಈ. ತುಕರಾಂ ಮತ್ತು ಅವರ ಪತ್ನಿ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಈ. ಅನ್ನಪೂರ್ಣ ಅವರು ನೈರುತ್ಯ ರೈಲ್ವೆ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಹೊಸಪೇಟೆ ನಗರ ನಿವಾಸಿ ಬಾಬುಲಾಲ್ ಜೈನ್ ಅವರ ನಿವಾಸಕ್ಕೆ ಶನಿವಾರ ಸೌಹಾರ್ದಯುತ ಬೇಟಿ ನೀಡಿದ್ದಾರೆ.
ಬಾಬುಲಾಲ್ ಜೈನ್ ಅವರ ನೇತೃತ್ವದಲ್ಲಿ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಸದಸ್ಯರು ಈ ಭಾಗದ ರೈಲ್ವೆ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿ, ಆರು ತಿಂಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಎಲ್.ಸಿ.ಗೇಟ್ ಸಂಖ್ಯೆ:85, ಅನಂತಶಯನ ಗುಡಿ ರೈಲ್ವೆ ಮೇಲ್ ಸೇತುವೆ ಕಾಮಗಾರಿಯನ್ನು ಚುರುಕುಗೊಳಿ¸ಬೇಕು. ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಹೊಸಪೇಟೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಹೆಚ್ಚುವರಿಯಾಗಿ ಪ್ಲಾಟ್ ಫಾರಂಗಳನ್ನು ನಿರ್ಮಿಸಿ ರೈಲ್ವೆ ಟರ್ಮಿನಲ್ ಸೌಲಭ್ಯ ನೀಡಬೇಕು. ಹೊಸಪೇಟೆ ಮಾರ್ಗವಾಗಿ ವಾರದಲ್ಲಿ ಎರಡು ದಿನ ಸಂಚರಿಸುತ್ತಿರುವ ಹುಬ್ಬಳ್ಳಿ - ಹೊಸಪೇಟೆ - ಚೆನೈ ರೈಲು ಸಂಖ್ಯೆ : 17313/17314 ರೈಲನ್ನು ಪ್ರತಿನಿತ್ಯ ಸಂಚರಿಸುವಂತೆ ತುರ್ತಾಗಿ ಕ್ರಮ ಕೈಗೊಳ್ಳಬೇಕು.
ಉತ್ತರ ಕರ್ನಾಟಕದಿಂದ ಮಂತ್ರಾಲಯ, ರಾಯಚೂರುಗೆ ಸಂಪರ್ಕ ಕಲ್ಪಿಸಲು ರದ್ದಾಗಿರುವ ರೈಲು ಮಾರ್ಗ ಸಂಖ್ಯೆ: 07335/07336 ಬೆಳಗಾಂ - ಹೈದ್ರಬಾದ್ - ಮಣಗೂರು ರೈಲನ್ನು ಪುನರ್ ಆರಂಭಿಸಬೇಕು. ಕರಾವಳಿ ಹಾಗೂ ಕಲ್ಯಾಣ ಕರ್ನಾಟಕಕ್ಕೆ ನೇರ ಸಂಪರ್ಕ ಕಲ್ಪಿಸಲು ಕೊಟ್ಟೂರು -ದಾವಣಗೆರೆ ಮಾರ್ಗವಾಗಿ ಹೊಸಪೇಟೆ - ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು.
ವಿಶ್ವ ಪಾರಂಪರಿಕ ತಾಣಗಳಾಗಿರುವ ಹಂಪೆ - ಬೇಲೂರು, ಹಳೆಬೀಡು - ಶ್ರವಣಬೆಳಗೋಳ -ಧರ್ಮಸ್ಥಳ - ಕುಕ್ಕೆಸುಬ್ರಮಣ್ಯ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಪ್ರಾರಂಭಿಸಿ ಪ್ರವಾಸೋದ್ಯಮವನ್ನು ಬಲಪಡಿಸಬೇಕು. ಶೈಕ್ಷಣಿಕ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಉನ್ನತ ವ್ಯಾಸಾಂಗಕ್ಕೆ ಹೋಗುವ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು. ಹೊಸಪೇಟೆ - ಮುಂಬೈ (ಸಿಎಸ್‍ಟಿಎಂ) ಗಾಡಿ ಸಂಖ್ಯೆ : 11139/11140ಯ ಹಳೆಯ ಕೋಚ್‍ಗಳನ್ನು ಬದಲಾಯಿಸಿ, ಪೂರ್ಣ ಪ್ರಮಾಣದ ಎಲ್.ಹೆಚ್.ಬಿ.ಕೋಚ್‍ಗಳಾಗಿ ಪರಿವರ್ತಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ವಿಜಯನಗರ ರೈಲ್ವೆ ಬಳಕೆದಾರರ ಸಂಘದ ವೈ. ಯಮುನೇಶ್, ಮಹೇಶ್ ಕುಡತಿನಿ, ನಗರಸಭೆ ಸದಸ್ಯರಾದ ಮಂಜುನಾಥ, ಬ್ರಾಹ್ಮಣ ಸಮಾಜದ ದಿವಾಕರ್, ಶ್ರೀಮತಿ ಆಶಲತಾ ಸೋಮಪ್ಪ ಹಾಗೂ ಜೈನ್ ಸಮಾಜದ ಮುಖಂಡರಾದ ಲಾಲ್ ಜೀ, ಕೇಸರಿ ಲಾಲ್ ಜೀ, ಮಹೇಂದ್ರ ಕುಮಾರ್, ಕಾಂತಿಲಾಲ್, ನವರತನ್ ಮಲ್, ಮಹೇಂದರ್ ಕಾನುಂಗಾ, ಮಹಾಂಗಿ ಲಾಲ್, ಅಶೋಕ್ ಜೈನ್ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್