
ಬಳ್ಳಾರಿ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಹಿಳೆಯರಿಗೆ ಸಮಾನತೆ ಇದ್ದು, ಸರ್ಕಾರದ ನಾನಾ ಯೋಜನೆಗಳು ಬಳಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನೆಡೆಯಬೇಕು ಎಂದು ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ ಅವರು ಕರೆ ನೀಡಿದರು.
ಶುಕ್ರವಾರ, ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಎನ್‌ಆರ್‌ಎಲ್‌ಎಂ ಯೋಜನೆಯಡಿ ಘನ ಮತ್ತು ದ್ರವ ತ್ಯಾಜ್ಯ ಘಟಕಗಳ ವಾಹನಗಳಿಗೆ ಎಸ್‌ಎಚ್‌ಜಿ ಮಹಿಳೆಯರಿಗೆ ಹಾಗೂ ಪುರುಷರಿಗೆ ನಾಲ್ಕು ಚಕ್ರದ ಲಘು ವಾಹನ ಚಾಲನಾ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಾಹನಗಳಿಗೆ ವಾಹನ ಚಾಲಕಿಯರನ್ನಾಗಿ ಸ್ವ-ಸಹಾಯ ಗುಂಪಿನ ಮಹಿಳೆಯರನ್ನು ಆಯ್ಕೆ ಮಾಡಲಾಗಿದ್ದು, ಧೈರ್ಯದಿಂದ ವಾಹನ ಚಲಾಯಿಸುವ ತರಬೇತಿಯನ್ನು ಆಸಕ್ತಿ ವಹಿಸಿ ಕಲಿಯಬೇಕು ಎಂದು ಆಶಿಸಿದರು.
ಯುವಕರು ಸಹ ಜೀವನ ನಿರ್ವಹಣೆಗಾಗಿ ಲಘು ವಾಹನಾ ಚಾಲನೆಯನ್ನು ಸ್ವ-ಉದ್ಯೋಗವನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ರಾಜೇಸಾಬ್ ಎಚ್.ಎರಿಮನಿ ಅವರು ಮಾತನಾಡಿ, ಸಂಸ್ಥೆಯಲ್ಲಿ ಕೌಶಲ್ಯ ತರಬೇತಿ ಜೊತೆಗೆ ವ್ಯಕ್ತಿತ್ವ ವಿಕಸನ, ಆತ್ಮ ವಿಶ್ವಾಸ, ಸ್ವ-ಉದ್ಯೋಗಕ್ಕೆ ಮಾರ್ಗದರ್ಶನ ನೀಡಲಾಗುತ್ತದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್‌ನ ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ್ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದ್ದು, ಪ್ರಸ್ತುತದಲ್ಲಿ ಎಲ್ಲಾ ರಂಗಗಳಲ್ಲಿ ಮಹಿಳೆಯರಿಗೆ ತುಂಬಾ ಅವಕಾಶಗಳಿದ್ದು, ಅವಕಾಶ ಬಳಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ತಾಪಂ ತಾಲ್ಲೂಕು ವ್ಯವಸ್ಥಾಪಕ ಗಂಗಾಧರ, ಉಪನ್ಯಾಸಕರಾದ ಜಡೇಶ, ದಿನೇಶ್ ಕುಮಾರ್, ಸಿದ್ದಲಿಂಗಮ್ಮ, ಸಂತೋಷ ಕುಮಾರ್, ಪರಮೇಶ ಸೇರಿದಂತೆ ಜಿಲ್ಲೆಯ 27 ಜನ ಶಿಬಿರಾರ್ಥಿಗಳು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್