
ಬೆಂಗಳೂರು, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನ ಸೌಧ ಸಭಾಂಗಣದಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆ ಕುರಿತ ಸಭೆ ನಡೆಯಿತು. ರಾಜ್ಯದಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಇನ್ನಷ್ಟು ಉತ್ತಮಪಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಭೂ ಬಳಕೆ ಬದಲಾವಣೆ ಹಾಗೂ ವಿವಿಧ ಎನ್‌ಒಸಿಗಳ ನೀಡಿಕೆಗೆ ನಿಗದಿತ ಕಾಲಮಿತಿಯನ್ನು ಕಡಿಮೆ ಮಾಡುವ ಕುರಿತು ವಿವರವಾದ ಪ್ರಸ್ತಾವನೆಯನ್ನು ತಯಾರಿಸಲು ಸೂಚಿಸಲಾಯಿತು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಇಲಾಖೆಯ ಅನುಮೋದನೆ ಪ್ರಕ್ರಿಯೆ ನಿಧಾನಗತಿಯಾಗಿರುವುದನ್ನು ಉಲ್ಲೇಖಿಸಿ, ಅದನ್ನು ತ್ವರಿತಗೊಳಿಸಲು ಹಾಗೂ ಅಗತ್ಯವಾದ ನಿಯಮಾವಳಿ ಬದಲಾವಣೆಗಳನ್ನು ಮಾಡಲು ನಿರ್ದೇಶಿಸಲಾಯಿತು. ಕೈಗಾರಿಕೆಗಳಿಗೆ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಸೌಲಭ್ಯ ಒದಗಿಸಲು ಇಲಾಖೆಗಳ ನಡುವೆ ಸಮನ್ವಯ ಅಗತ್ಯವಿದೆ ಎಂದು ಹೇಳಿದರು.
ಈ ವರ್ಷದ ಆರಂಭದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರೂ.10.27 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸಲ್ಪಟ್ಟಿದ್ದು, ಅದರ ಶೇಕಡಾ 60 ಹೂಡಿಕೆಗಳು ಈಗಾಗಲೇ ಅನುಷ್ಠಾನ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು. ರೂ.1.5 ಲಕ್ಷ ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ವಿವಿಧ ಹಂತಗಳಲ್ಲಿ ಇವೆ ಎಂದು ತಿಳಿಸಿದರು.
“ಸುಪ್ರೀಂ ಕೋರ್ಟ್‌ನ ನೆಪ ಹೇಳಿಕೊಂಡು ಅಧಿಕಾರಿಗಳು ಕೂರಬಾರದು. ಅಕ್ಕಪಕ್ಕದ ರಾಜ್ಯಗಳಿಗೂ ಇದೇ ಕಾನೂನು ಅನ್ವಯವಾಗುತ್ತದೆ. ಬೇರೆ ರಾಜ್ಯಗಳಿಗೆ ಆಗದ ಅಡಚಣೆ ನಮಗೆ ಹೇಗೆ ಆಗಲಿದೆ ಅದೇ ನೆಪ ಹೇಳಿಕೊಂಡು ಕೆಲಸ ನಿಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್ಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa