ಮುಂಡರಗಿಯಲ್ಲಿ ಬಸ್ ತಡೆದು ಪ್ರತಿಭಟನೆ
ಗದಗ, 24 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆ, ಮುಂಡರಗಿ ಪಟ್ಟಣದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು. ಕೊಪ್ಪಳ ಜಿಲ್ಲೆಯ ಸರ್ಕಾರಿ ಪದವಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಹಲವು ದಿನಗಳಿಂದ ಪರದಾಟ ನಡೆಯುತ್ತಿದ್ದು, ಕೊನೆಗೆ ವಿದ್ಯಾರ
ಪೋಟೋ


ಗದಗ, 24 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆ, ಮುಂಡರಗಿ ಪಟ್ಟಣದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು. ಕೊಪ್ಪಳ ಜಿಲ್ಲೆಯ ಸರ್ಕಾರಿ ಪದವಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಹಲವು ದಿನಗಳಿಂದ ಪರದಾಟ ನಡೆಯುತ್ತಿದ್ದು, ಕೊನೆಗೆ ವಿದ್ಯಾರ್ಥಿಗಳು ತಮ್ಮ ಅಸಮಾಧಾನವನ್ನು ಪ್ರತಿಭಟನೆಯ ಮೂಲಕ ಹೊರಹಾಕಿದ್ದಾರೆ.

ಮುಂಡರಗಿ ಬಸ್ ನಿಲ್ದಾಣದಿಂದ ಬೆಳಿಗ್ಗೆ ಹಾಗೂ ಸಂಜೆ ಕಾಲೇಜಿಗೆ ತೆರಳುವ ಸಮಯದಲ್ಲಿ ಬಸ್ ಸೌಲಭ್ಯ ಸರಿಯಾಗಿ ಲಭ್ಯವಾಗದ ಕಾರಣ ವಿದ್ಯಾರ್ಥಿಗಳು ಬಸ್ ನ್ನೇ ತಡೆದು ಚಾಲಕನಿಗೆ ತರಾಟೆ ತೆಗೆದುಕೊಂಡರು. “ಪ್ರತಿ ದಿನ ಕಾಲೇಜಿಗೆ ಹೋಗಲು ಒಂದು ಬಸ್‌ ಸಿಗುವುದೇ ಕಷ್ಟ, ಕೆಲವು ವೇಳೆ ಮಧ್ಯೆ ಬಸ್ ನಿಲ್ಲಿಸುತ್ತಾರೆ. ನಾವು ಸಮಯಕ್ಕೆ ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ” ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಕೊಪ್ಪಳ ರಸ್ತೆಯ ಹೊರವಲಯದಲ್ಲಿರುವ ಸರ್ಕಾರಿ ಪದವಿ ಕಾಲೇಜಿಗೆ ಮುಂಡರಗಿಯಿಂದ ದಿನವೂ ನೂರಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಆದರೆ ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ನಿಂತು ಬಸ್ ಕಾದು ಕಂಗಾಲಾಗುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಬಸ್ ತುಂಬಿ ಹೋದರೆ ವಿದ್ಯಾರ್ಥಿಗಳನ್ನು ಹತ್ತಿಸದೆ ಹೋಗುತ್ತಾರೆ ಎನ್ನುವ ಆರೋಪವೂ ಇದೆ.

ಈ ಕುರಿತು ಸ್ಥಳಕ್ಕೆ ಆಗಮಿಸಿದ ಪೋಷಕರು ಸಹ ಸಾರಿಗೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ಮಕ್ಕಳು ಕಿಲೋಮೀಟರ್‌ಗಳಷ್ಟು ನಡೆದು ಕಾಲೇಜು ಹೋಗ್ತಿದ್ದಾರೆ. ಅಷ್ಟಕ್ಕೂ ಬಸ್ ಸಿಗೋದಿಲ್ಲ. ಸಾರಿಗೆ ಅಧಿಕಾರಿಗಳು ನಮ್ಮ ಸಮಸ್ಯೆ ಕಡೆಗಣಿಸುತ್ತಿದ್ದಾರೆ” ಎಂದು ಪೋಷಕರು ಹೇಳಿದರು.

ಪ್ರತಿಭಟನೆಯಿಂದ ಕೆಲಕಾಲ ಬಸ್ ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ಪೊಲೀಸರು ಮತ್ತು ಸಾರಿಗೆ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಅಧಿಕಾರಿಗಳು ವಿದ್ಯಾರ್ಥಿಗಳ ಬೇಡಿಕೆಗಳನ್ನು ದಾಖಲು ಮಾಡಿಕೊಂಡು ಶೀಘ್ರದಲ್ಲೇ ಬಸ್ ಸೌಲಭ್ಯ ಹೆಚ್ಚಿಸುವ ಭರವಸೆ ನೀಡಿದರು.

ಮುಂಡರಗಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಬಸ್ ಕೊರತೆಯ ಸಮಸ್ಯೆ ಹಳೆಯದೇ ಆಗಿದ್ದು, ಇದೀಗ ವಿದ್ಯಾರ್ಥಿಗಳು ರಸ್ತೆಗಿಳಿದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande