
ಗದಗ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅನ್ನದಾತನ ಕೈಯಲ್ಲಿ ಕಣ್ಣೀರು, ಹೊಲದಲ್ಲಿ ಹರಿದಿದೆ. ಗದಗ ಜಿಲ್ಲೆಯ ಕೃಷಿ ಜೀವನದ ಕಹಿ ಸತ್ಯವನ್ನು ಬಿಚ್ಚಿಡುತ್ತಿವೆ. ಮಗು ಬೆಳೆಸಿದಂತೆ ಬೆಳೆಸಿದ ಈರುಳ್ಳಿಯನ್ನು, ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೈತರು ಕೈಯಾರೆ ಹರಗಿ ನಾಶ ಮಾಡುತ್ತಿದ್ದಾರೆ.
ಗದಗ ತಾಲೂಕಿನ ನೀರಲಗಿ ಮತ್ತು ಬೆನಕೊಪ್ಪ ಗ್ರಾಮಗಳ ರೈತರು ಈಗ ತಮ್ಮ ಹೃದಯದ ಕಸಿವಿಸಿಯನ್ನು ಹೊಲದಲ್ಲೇ ಕಣ್ಣೀರಿಗೆ ಮಿಶ್ರಿತ ಧ್ವನಿಯಲ್ಲಿ ಹೊರಹಾಕುತ್ತಿದ್ದಾರೆ. ಎಂಟು ಎಕರೆಯಲ್ಲಿ ಈರುಳ್ಳಿ ಬೆಳೆ ಬೆಳೆದ ಪ್ರಶಾಂತ್ ಪೂಜಾರ ಮತ್ತು ಕಾಸೀಂಸಾಬ್ ಅವರ ಜೀವನ ಈಗ ಚದುರಿದ ಕಾಗದದಂತೆ ಬಿದ್ದಿದೆ. ಹಗಲು ರಾತ್ರಿ ಕಷ್ಟಪಟ್ಟು, ಸಾಲ ಮಾಡಿ, ಬೆವರು ಸುರಿಸಿ ಬೆಳೆದ ಈರುಳ್ಳಿ ನಾಶ ಮಾಡಲಾಗಿದೆ.
ಈರುಳ್ಳಿ ಬೆಳೆ ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಸುಮಾರು 1500 ಚೀಲಗಳಷ್ಟು ಉತ್ಪಾದನೆ ಸಿಕ್ಕಿತ್ತು. ಆದರೆ ಮಾರುಕಟ್ಟೆಯಲ್ಲಿ ದೊರಕಿದ ದರ ಆಘಾತಕಾರಿಯಾಗಿದೆ. “ಒಂದು ಕ್ವಿಂಟಾಲ್ ಈರುಳ್ಳಿಯನ್ನು ಮಾರ್ಕೆಟ್‌ಗೆ ಸಾಗಿಸಲು ₹500 ಖರ್ಚು ಆಗುತ್ತೆ, ಆದರೆ ದರ ಕೇವಲ ₹50 ರಿಂದ ₹300 ಕ್ವಿಂಟಾಲ್‌ಗೆ ಮಾತ್ರ ಸಿಗ್ತಿದೆ,” ಎಂದು ರೈತರು ಕಣ್ಣೀರಿನಿಂದ ಹೇಳಿದ್ದಾರೆ. ಬೆಲೆ ಕೇಳಿ ನೊಂದು, ಅವರು ಹೊಲದಲ್ಲೇ ಟ್ರಾಕ್ಟರ್ ಓಡಿಸಿ ಬೆಳೆ ನಾಶಮಾಡಿದ್ದಾರೆ.
“ಈರುಳ್ಳಿ ಬೆಳೆ ಮಗುವಿನಂತಿತ್ತು. ಬೆಳೆಸೋಕೆ ಎಷ್ಟು ಕಷ್ಟಪಟ್ಟಿದ್ದೇವೆ, ಆದ್ರೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಸರ್ಕಾರ ನೋಡುತ್ತಾ ಕುಳಿತಿದೆ. ಹೀಗಾದರೆ ರೈತ ಬದುಕೋದು ಹೇಗೆ?” ಎಂದು ಪ್ರಶಾಂತ್ ಪೂಜಾರ ನೋವು ಹಂಚಿಕೊಂಡರು.
ಗದಗ ಜಿಲ್ಲೆಯಾದ್ಯಂತ ಈರುಳ್ಳಿ ಬೆಲೆ ಕುಸಿತವು ರೈತರ ಬದುಕಿನ ಮೇಲಿನ ಬಿರುಗಾಳಿಯಾಗಿದೆ. ಜಿಲ್ಲೆಯ ಏಳು ತಾಲೂಕುಗಳಾದ ಗದಗ, ಶಿರಹಟ್ಟಿ, ಮುಂಡರಗಿ, ಗಜೇಂದ್ರಗಡ, ರೋಣ, ಲಕ್ಷ್ಮೇಶ್ವರ ಹಾಗೂ ನರೇಗಲ್ಲ ಪ್ರದೇಶಗಳಲ್ಲಿ ಈರುಳ್ಳಿ ಬೆಳೆದ ರೈತರು ಈಗ ನಿರಾಶೆಯ ಅಂಚಿನಲ್ಲಿ ನಿಂತಿದ್ದಾರೆ. ಹಿಂಗಾರು ಬಿತ್ತನೆಗೂ ಹಣದ ಕೊರತೆ ಎದುರಾಗಿದೆ.
ಮಾರುಕಟ್ಟೆಗಳಲ್ಲಿ ಸಮರ್ಪಕವಾದ ಬೆಲೆ ಸಿಗುತ್ತಿಲ್ಲ, ಸರ್ಕಾರದ ಖರೀದಿ ಕೇಂದ್ರಗಳಿಲ್ಲದ ಕಾರಣ ರೈತರು ಕಳವಳಗೊಂಡಿದ್ದಾರೆ. ಈ ಬಾರಿ ಪರಿಸ್ಥಿತಿ ಇನ್ನಷ್ಟು ದುಸ್ಥಿತಿಗೆ ತಲುಪಿದೆ. ರೈತರು ಸರ್ಕಾರದಿಂದ ಬೆಂಬಲ ಬೆಲೆ ಘೋಷಣೆ, ಮಾರುಕಟ್ಟೆ ಖರೀದಿ ಕೇಂದ್ರ ಸ್ಥಾಪನೆ, ಮತ್ತು ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಸಾಲ ಮಾಡಿ ಬೆಳೆದ ಈರುಳ್ಳಿ ಬೆಳೆ ನಾಶವಾದ ಪರಿಣಾಮ, ಅನೇಕರು ಸಾಲದ ಒತ್ತಡದಲ್ಲಿ ಬದುಕು ಕಳೆಯುತ್ತಿದ್ದಾರೆ. “ಬೆಂಬಲ ಬೆಲೆ ಘೋಷಿಸಿ ಈರುಳ್ಳಿಯನ್ನು ಸರ್ಕಾರ ಖರೀದಿ ಮಾಡಿದ್ರೆ ಮಾತ್ರ ರೈತರು ಬದುಕುಳಿಯುತ್ತಾರೆ. ಇಲ್ಲವಾದರೆ ಮುಂದಿನ ಹಂಗಾಮಿನ ಬಿತ್ತನೆ ಮಾಡೋ ಸಾಧ್ಯವಿಲ್ಲ,” ಎಂದು ರೈತ ಕಾಸೀಂಸಾಬ್ ಮನವಿ ಮಾಡಿದರು.
“ಸಾಲದ ಬಾಧೆ, ಮಾರುಕಟ್ಟೆಯ ನಿರ್ಲಕ್ಷ್ಯ, ಹವಾಮಾನ ಅಸ್ಥಿರತೆ ಈ ಎಲ್ಲವು ರೈತರ ಬಾಳಲ್ಲಿ ಕತ್ತಲೆ ತುಂಬಿವೆ. ರೈತರ ಬದುಕಿಗೆ ಬೆಳಕು ತರಬೇಕಾದ ಸರ್ಕಾರಗಳು ಮೌನವಾಗಿವೆ,” ಎಂದು ರೈತ ನಾಯಕರು ಖಂಡಿಸಿದ್ದಾರೆ.
ಒಟ್ಟಿನಲ್ಲಿ, ಗದಗದ ಹೊಲಗಳಲ್ಲಿ ಈಗ ಈರುಳ್ಳಿಯ ಸುವಾಸನೆಗಿಂತ ಹೆಚ್ಚು ಕಣ್ಣೀರು ಮತ್ತು ನೋವಿನ ವಾಸನೆತ್ತಿದೆ. ರೈತರು ಮಣ್ಣಿನೊಂದಿಗೆ ಬೆರೆತು ಹೋರಾಡುತ್ತಿರುವ ಈ ಕ್ಷಣದಲ್ಲಿ, ಸರ್ಕಾರದಿಂದ ಸ್ಪಷ್ಟ ನೀತಿ ಹಾಗೂ ತಕ್ಷಣದ ಪರಿಹಾರ ಕ್ರಮಗಳು ಮಾತ್ರ ಅವರ ಬದುಕಿಗೆ ಬೆಳಕಾಗಬಹುದು.
ಹಿಂದೂಸ್ತಾನ್ ಸಮಾಚಾರ್ / lalita MP