


ಬಳ್ಳಾರಿ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ನಿರಂತರ ನಿಗಾವಣೆಯೊಂದಿಗೆ ಸಕಾಲದಲ್ಲಿ ಸೇವೆ ಒದಗಿಸುವ ಮೂಲಕ ತಾಯಿ ಮರಣ ತಡೆಗಟ್ಟಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ಸೂಚಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಿಎಂಸಿಆರ್‌ಸಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಹಾಗೂ ಕ್ಷೇತ್ರ ಸಿಬ್ಬಂದಿಯವರೊ0ದಿಗೆ ತಾಯಿ ಮರಣ ಕುರಿತು ಜಿಲ್ಲಾ ಮಟ್ಟದ ಉಪಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರ ಮರಣವನ್ನು ಶೂನ್ಯಕ್ಕೆ ತರಲು ಸೂಕ್ತ ಮುಂಜಾಗ್ರತೆವಹಿಸಬೇಕು. ಗಂಭೀರ ಸಮಸ್ಯೆಗಳು ಕಂಡುಬ0ದಾಗ ಪಾಲಕರಿಗೆ ತಿಳಿಸಿ ಮನವರಿಕೆ ಮಾಡಬೇಕು. ಚಿಕಿತ್ಸೆ ಅಗತ್ಯವಿದ್ದಲ್ಲಿ ಮಾತ್ರ ಮೇಲ್ಮಟ್ಟದ ಆಸ್ಪತ್ರೆಗೆ ಮುಂಚಿತವಾಗಿ ಮಾಹಿತಿ ನೀಡಿ ಆಂಬ್ಯುಲೆನ್ಸ್ನಲ್ಲಿ ಕಳುಹಿಸಬೇಕು. ಮನೆಯಲ್ಲಿ ಹೆರಿಗೆ ಮಾಡಿಸುವುದರಿಂದ ತಾಯಿ ಮಗುವಿಗೆ ಉಂಟಾಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿ, ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಇರುವ ವೈದ್ಯಕಿಯ ಸೌಲಭ್ಯಗಳ ಬಗ್ಗೆ ಕ್ಷೇತ್ರ ಮಟ್ಟದಲ್ಲಿ ಸಾರ್ವಜನಿಕರಿಗೆ ಜಾಗೃತಿ ನೀಡಬೇಕು ಎಂದು ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಗರ್ಭಿಣಿ ಎಂದು ತಿಳಿದ ದಿನದಿಂದಲೇ ಗರ್ಭಿಣಿಗೆ ಕಂಡು ಬರಬಹುದಾದ ಸಾಮಾನ್ಯ ಗಂಭೀರ ಸಮಸ್ಯೆಗಳ ಕುರಿತು ಮುತುವರ್ಜಿ ವಹಿಸಲು ಕ್ಷೇತ್ರ ಮಟ್ಟದ ಸಿಬ್ಬಂದಿಯವರು ಸದಾ ತಾಯಿಯೊಂದಿಗೆ ಹಾಗೂ ಪಾಲಕರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ನಿರ್ದೇಶನ ನೀಡಿದರು.
ಕಬ್ಬಿಣಾಂಶ ಮಾತ್ರೆಗಳನ್ನು ನುಂಗಿಸುವ ಮೂಲಕ ರಕ್ತ ಹೀನತೆ ತಡೆಯಲು ಮತ್ತು ನಿಗಧಿತವಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೆಚ್.ಐ.ವಿ ಹೆಚ್‌ಬಿಸಿಜಿ ಪರೀಕ್ಷೆಯನ್ನು ಕೈಗೊಳ್ಳುವಂತೆ ಸೂಚಿಸಬೇಕು.ಅವಶ್ಯಕತೆ ಇದ್ದಲ್ಲಿ ವೈದ್ಯರ ಸಲಹೆಯಂತೆ ಮಾಡಿಸಿ ತಾಯಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು, ಹದಿಹರೆಯದ ಗರ್ಭಿಣಿಯರು ಕಂಡುಬ0ದಲ್ಲಿ ಅವರಿಗೆ ಆಪ್ತಸಮಾಲೋಚನೆ ನಡೆಸಿ ಅವರ ಆರೋಗ್ಯ ಹಿತದೃಷ್ಟಿಯಿಂದ ಗರ್ಭಾಪಾತ ಮಾಡಿಸಬೇಕು ಹಾಗೂ ಬೇಗ ಗರ್ಭ ಧರಿಸದೇ ಇರಲು ಕುಟುಂಬ ಕಲ್ಯಾಣ ಅಂತರ ವಿಧಾನಗಳನ್ನು ಆಪ್ತಸಮಾಲೋಚನೆ ಮೂಲಕ ಮನವೊಲಿಸಬೇಕು ಎಂದು ತಿಳಿಸಿದರು.
ಶೇ.25ಕ್ಕಿಂತ ದೇಹದ ತೂಕ ಕಡಿಮೆ ಇರುವ ಗರ್ಭಿಣಿಯರಿಗೆ ಹೆಚ್ಚಿನ ಗಮನಹರಿಸಿ, ಆಸ್ಪತ್ರೆಯಲ್ಲಿ ಹೆರಿಗೆಯಾದಲ್ಲಿ ಸಹಜ ಹೆರಿಗೆಗೆ 3 ದಿನಗಳು, ಸಿಜೇರಿಯನ್ ಹೆರಿಗೆಗೆ ಏಳು ದಿನಗಳ ಕಾಲ ಕಡ್ಡಾಯವಾಗಿ ದಾಖಲು ಮಾಡಿಕೊಂಡು ನಿರಂತರವಾಗಿ ತಾಯಿಯ ಆರೋಗ್ಯದ ಕುರಿತು ಪರಿಶೀಲಿಸುವ ಮೂಲಕ ವೈದ್ಯರು ಮತ್ತು ಸಿಬ್ಬಂದಿಯವರು ಯಾವುದೇ ಲೋಪವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜನನಿ ಶಿಶು ಸುರಕ್ಷಾ ಕಾರ್ಯಕ್ರಮ ಯೋಜನೆಯಡಿ ದೊರಕುವ ಉಚಿತ ಊಟ, ಉಚಿತ ಔಷಧಿ, ಉಚಿತ ರಕ್ತ, ಉಚಿತ ಪರೀಕ್ಷೆ, ಉಚಿತ ನಗು-ಮಗು ವಾಹನ ಮೂಲಕ ಮನೆಗೆ ಬಿಡುವ ಕುರಿತು ಹಾಗೂ ಜನನಿ ಸುರಕ್ಷಾ ಯೋಜನೆಯಡಿ ಸಹಾಯಧನವನ್ನು ಅವರ ಖಾತೆಗೆ ಜಮೆ ಮಾಡುವ ಬಗ್ಗೆ ನಿಗಾ ವಹಿಸುವುದರ ಮೂಲಕ ತಾಯಿ ಮತ್ತು ಮಗುವಿನ ಕಾಳಜಿಯೊಂದಿಗೆ ತಾಯಿ ಮರಣಗಳನ್ನು ಶೂನ್ಯಕ್ಕೆ ತರಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಎಮ್‌ಸಿಆರ್‌ಸಿ ಪ್ರಸೂತಿ ವಿಭಾಗದ ಡಾ.ರಾಮರಾಜ್, ಜಿಲ್ಲಾ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಶ್ರೀಲಕ್ಷಿ, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಡಿಎನ್‌ಒ ಗಿರೀಶ್ ಸೇರಿದಂತೆ ವೈದ್ಯಾಧಿಕಾರಿಗಳು, ಕ್ಷೇತ್ರ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್