



ಬಳ್ಳಾರಿ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರ ಜನ್ಮ ದಿನದ ಅಂಗವಾಗಿ ನಿಯಮಬಾಹಿರವಾಗಿ ಫ್ಲೆಕ್ಸ್ ಗಳನ್ನು ಪ್ರದರ್ಶನ ಮಾಡಿ ನಗರದ ಸೌಂದರ್ಯವನ್ನು ಹಾಳು ಮಾಡಿರುವವರ ವಿರುದ್ಧ ಅಗತ್ಯ ಕ್ರಮಕೈಗೊಂಡು ದಂಡವನ್ನು ವಿಧಿಸಲು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ಕುಮಾರ್ ನಾಯ್ಡು ಅವರು, ನಿಗದಿತ ಸ್ಥಳಗಳಲ್ಲಿ ಪರವಾನಿಗೆ ಪಡೆದು ಕಟೌಟುಗಳನ್ನು - ಫ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಬಳ್ಳಾರಿ ನಗರಾದ್ಯಂತ ಕಾನೂನುಬಾಹಿರವಾಗಿ - ನಿಯಮಗಳನ್ನು ಉಲ್ಲಂಘನೆ ಮಾಡಿ, ಪಾಲಿಕೆಗೆ ಯಾವುದೇ ಆದಾಯವಿಲ್ಲದೇ ಫ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಸಿರುವುದು ಸರಿಯಲ್ಲ ಎಂದರು.
ಶಾಸಕರ ಹುಟ್ಟುಹಬ್ಬದ ಅಂಗವಾಗಿ ಅವರ ಹಿಂಬಾಲಕರೇ ಕಾನೂನು ಉಲ್ಲಂಘನೆ ಮಾಡುತ್ತಿರುವುದು ಸೂಕ್ತವಲ್ಲ. ರಸ್ತೆಗೆ ಕುಣಿ ತೋಡಿ ಕಟೌಟುಗಳನ್ನು ಕಟ್ಟಲಾಗುತ್ತಿದೆ. ವೃತ್ತಗಳ ಸುತ್ತಲೂ ಸುಗಮ ಸಂಚಾರಕ್ಕೆ ತೊಂದರೆ ಆಗುವ ರೀತಿಯಲ್ಲಿ ಬ್ಯಾನರ್‍ಗಳ ಪ್ರದರ್ಶನ ನಡೆದಿದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಅಧಿಕಾರಿಗಳು ಕಣ್ಣುಮುಚ್ಚಿ ಕೂತು ಆಡಳಿತ ಪಕ್ಷದ ಕೈಗೊಂಬೆಗಳಾಗಿರುವುದು ವ್ಯವಸ್ಥೆಯ ಕೈಗನ್ನಡಿ ಎಂದು ಟೀಕಿಸಿದರು.
ನಂತರ ಜಿಲ್ಲಾಡಳಿತ, ಮೇಯರ್, ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್‍ಗೆ ಬಿಜಿಪಿ ಲಿಖಿತ ಮನವಿಯನ್ನು ಸಲ್ಲಿಸಿತು.
ನಗರ ಬಿಜೆಪಿ ಅಧ್ಯಕ್ಷ ಗುರ್ರಂ ವೆಂಕಟರಮಣ, ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್