

ಮುನಿರಾಬಾದ್, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಸಮುದಾಯ ಆರೋಗ್ಯ ಕೇಂದ್ರ, ಮುನಿರಾಬಾದ್ ಇವರ ಸಂಯುಕ್ತಾಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರದಂದು ಅಯೋಡಿನ್ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮ ಅಂಗವಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುನಿರಾಬಾದ್‌ನ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕೆ.ಹೆಚ್ ತೊಗರಿ ಅವರು, ಪ್ರತಿ ವರ್ಷ ಅಕ್ಟೋಬರ್ 21 ರಿಂದ 27 ರವರೆಗೆ ಅಯೋಡಿನ್ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತದೆ.
ಮನುಷ್ಯನಿಗೆ ಬದುಕಲು ಮುಖ್ಯವಾಗಿ ನೀರು, ಗಾಳಿ ಹಾಗೂ ಆಹಾರ ಅತ್ಯಂತ ಅವಶ್ಯಕವಾಗಿ ಬೇಕಾಗುತ್ತದೆ. ಅದರಂತೆ ಪೌಷ್ಠಿಕ ಆಹಾರ ಸೇವಿಸುವುದರ ಜೊತೆಗೆ ಅಯೋಡಿನ್ ಅಂಶವಿರುವ ಉಪ್ಪನ್ನೇ ಬಳಸಬೇಕು. ಇದು ಮನುಷ್ಯನ ದೈಹಿಕ, ಮಾನಸಿಕ, ಬೆಳವಣಿಗೆಗೆ ಅತೀ ಅವಶ್ಯಕವಾಗಿದೆ. ಈ ಅಯೋಡಿನ್ ಅಂಶ ಮುಖ್ಯವಾಗಿ ಗಜ್ಜರಿ, ಮೀನು, ಸಮುದ್ರಕಳೆ, ಸಿಗಡಿಮೀನು ಇವುಗಳಲ್ಲಿ ಹೆಚ್ಚಾಗಿ ದೊರೆಯುತ್ತದೆ. ಪ್ರತಿಯೊಬ್ಬರು ತಮ್ಮ ದಿನನಿತ್ಯದ ಆಹಾರದಲ್ಲಿ ಅಯೋಡಿನ್ ಅಂಶವಿರುವ ಉಪ್ಪನ್ನೇ ಬಳಸಬೇಕು. ಇದು ಮನುಷ್ಯನ ಬುದ್ದಿಮಟ್ಟ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಮಕ್ಕಳು ಹಾಗೂ ಹದಿ-ಹರೆಯದವರು ಕಡ್ಡಾಯವಾಗಿ ಅಯೋಡಿನ್ ಉಪ್ಪನ್ನೇ ಉಪಯೋಗಿಸಬೇಕು ಎಂದು ಹೇಳಿದರು.
ಅಯೋಡಿನ್ ಅಂಶವಿರುವ ಉಪ್ಪನ್ನು ಬಳಸದಿದ್ದರೆ ಗರ್ಭಿಣಿಯರಲ್ಲಿ ಪದೇ ಪದೇ ಗರ್ಭಪಾತ, ಸತ್ತು ಹುಟ್ಟುವ ಮಕ್ಕಳು, ಸಂತಾನೋತ್ಪತ್ತಿಯಲ್ಲಿ ತೊಂದರೆ, ದೈಹಿಕ ಬೆಳವಣಿಗೆ ಕುಂಠಿತ, ವಯಸ್ಕರಲ್ಲಿ ನಿಶಕ್ತಿ, ಕಾರ್ಯನಿರ್ವಹಣೆಯಲ್ಲಿ ವೈಫಲ್ಯತೆ, ಗಳಗಂಡರೋಗ ಉಂಟಾಗುತ್ತದೆ. ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ, ಕಿವುಡ ಹಾಗೂ ಮೂಕತನ, ಮೆಳ್ಳೆಗಣ್ಣು, ಕುಬ್ಜತನ ಉಂಟಾಗುತ್ತದೆ. ಆದ್ದರಿಂದ ಮೇಲ್ಕಾಣಿಸಿದ ಎಲ್ಲಾ ಗುಂಪಿನವರು ಕಡ್ಡಾಯವಾಗಿ ಅಯೋಡಿನ್ ಉಪ್ಪನ್ನೇ ಬಳಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ.ರಾಜಲಕ್ಷಿ, ಆಯುಷ್ ವೈದ್ಯಾಧಿಕಾರಿ ಡಾ.ಜ್ಯೋತಿ, ಎನ್.ಸಿ.ಡಿ ವೈದ್ಯಾಧಿಕಾರಿ ಡಾ.ಪವನ್‌ಸಿಂಗ್, ಡಾ.ರಾಜಶೇಖರ, ಜಿಲ್ಲಾ ಎನ್.ಸಿ.ಡಿ ಕಾರ್ಯಕ್ರಮದ ಸಯೋಜಕರಾದ ಡಾ.ಜಯಶ್ರೀ, ಡಾ.ಮಾಧವಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ವಿ ಸಜ್ಜನರ, ಜಿಲ್ಲಾ ಮೈಕ್ರೋಬಯೋಲಜಿಸ್ಟ್ ಹರ್ಷವರ್ಧನ, ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾದ ಸುಧೀರ, ಗರ್ಭಿಣಿ-ಬಾಣಂತಿಯರು, ತಾಯಂದಿರು ಹಾಗೂ ಇತರೆ ಸಿಬ್ಬಂದಿ ಭಾಗವಹಿಸಿದ್ದರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್