
ಗದಗ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ತಾಲೂಕಿನ ನಾಗಾವಿ ಮತ್ತು ಹರ್ತಿ ಗ್ರಾಮದ ರೈತರು ಪರದಾಟ ನಡೆಸಿದ್ದಾರೆ. ವಿಂಡ್ ಪ್ಯಾನ್ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ತಮ್ಮ ಬೆಳೆಗಳು ನಾಶವಾದರೂ ಪರಿಹಾರ ಸಿಗದ ಕಾರಣಕ್ಕೆ ರೈತರು ವಿಂಡ್ ಪ್ಯಾನ್ ಮಷಿನ್‌ಗಳನ್ನು ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ನಾಗಾವಿ, ಹರ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖಾಸಗಿ ಕಂಪನಿ ಪವನ ವಿದ್ಯುತ್ ಘಟಕಗಳನ್ನು ಸ್ಥಾಪಿಸಿದ್ದು, ಕಳೆದ 17 ವರ್ಷಗಳಿಂದ ಸುಮಾರು 100 ಕ್ಕೂ ಹೆಚ್ಚು ಪ್ಯಾನ್‌ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಮೂರು ವರ್ಷಗಳ ಹಿಂದೆ ಕಂಪನಿ ನಡೆಸಿದ ಕಾಮಗಾರಿ ರೈತರ ಬದುಕಿಗೆ ಮುಳ್ಳಾಗಿದೆ.
ಮಳೆ ಬಂದಾಗ ಹರ್ತಿ ಗ್ರಾಮದಿಂದ ಹರಿಯುವ ಮಳೆನೀರು ಸಹಜವಾಗಿ ಪಿಂಜಾರಹಳ್ಳಿಗೆ ಸೇರುತ್ತಿತ್ತು. ಆದರೆ ಕಂಪನಿ ರಸ್ತೆ ಕಾಮಗಾರಿ ಹೆಸರಲ್ಲಿ ಹೊಸ ಕಾಲುವೆ ತೋಡಿ ನೀರು ಹರಿಯುವ ದಿಕ್ಕನ್ನೇ ಬದಲಿಸಿದ್ದು, ಅದರ ಪರಿಣಾಮವಾಗಿ ಮಳೆನೀರು ನಾಗಾವಿ ಹಳ್ಳದ ಕಡೆ ಹರಿದು ರೈತರ ಹೊಲಗಳಿಗೆ ನುಗ್ಗಿದೆ. ಫಲವಾಗಿ ಮೆಕ್ಕೆಜೋಳ, ಶೇಂಗಾ, ಹೆಸರು ಸೇರಿದಂತೆ ಹಲವಾರು ಬೆಳೆಗಳು ಸಂಪೂರ್ಣ ಹಾಳಾಗಿವೆ.
ಈ ಘಟನೆ ಬಳಿಕ ರೈತರು ಆಡಳಿತದ ಗಮನಕ್ಕೆ ವಿಷಯ ತಂದಾಗ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಹಾಗೂ ಗದಗ ಉಪವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಾಥಮಿಕ ವರದಿಯಲ್ಲಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ದೃಢಪಡಿಸಿ, ಕಂಪನಿ ರೈತರಿಗೆ ಪರಿಹಾರ ನೀಡಲು ಭರವಸೆ ನೀಡಿತ್ತು. ಆದರೆ, ಎರಡು ತಿಂಗಳಾದರೂ ಪರಿಹಾರ ಸಿಕ್ಕಿಲ್ಲ.
ಇದರಿಂದ ರೊಚ್ಚಿಗೆದ್ದ ರೈತರು ಹಾಲಿ ಕಾರ್ಯನಿರ್ವಹಿಸುತ್ತಿದ್ದ ವಿಂಡ್ ಪ್ಯಾನ್‌ಗಳನ್ನು ಬಂದ್ ಮಾಡಿ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪರಿಹಾರ ಕೊಡದವರೆಗೂ ಯಾವುದೇ ಯಂತ್ರ ಓಡೋದಿಲ್ಲ” ಎಂದು ಪಟ್ಟು ಹಿಡಿದಿದ್ದಾರೆ.
ರೈತರು ಆರೋಪಿಸಿದ್ದು “ನಾವು ಹೋದರೆ ಕಂಪನಿಯವರು ಬೆದರಿಕೆ ಹಾಕ್ತಾರೆ, ಪೊಲೀಸರಿಗೆ ದೂರು ಕೊಡುತ್ತೇವೆ ಅಂತಾ ಹೇಳ್ತಾರೆ. ಬೆಳೆ ನಾಶದಿಂದ ನಾವೇ ಸಾಲದ ಹೊರೆ ಹೊತ್ತುಕೊಂಡಿದ್ದೇವೆ, ಪರಿಹಾರ ಸಿಗದಿದ್ದರೆ ಬದುಕೇ ಕತ್ತಲೆಯಾಗಿದೆ” ಎಂದು ಕಣ್ಣೀರಿನಿಂದ ಹೇಳಿಕೊಂಡಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಹಲವು ಬಾರಿ ಮನವಿ ಮಾಡಿದರೂ ಪ್ರತಿಕ್ರಿಯೆ ಸಿಕ್ಕಿಲ್ಲದ ಹಿನ್ನೆಲೆಯಲ್ಲಿ, ನೂರಾರು ರೈತರು ಗದಗ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರೈತರಿಗೆ ಬೆಂಬಲವಾಗಿ ಸ್ಥಳೀಯ ರೈತ ಸಂಘಟನೆಗಳೂ ಸೇರಿಕೊಂಡಿದ್ದು, ಜಿಲ್ಲಾಡಳಿತದಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP