
ಗದಗ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ 2023–25ನೇ ಸಾಲಿನ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ “ಸವಿನೆನಪು” ಎಂಬ ಶೀರ್ಷಿಕೆಯೊಂದಿಗೆ ಬೀಳ್ಕೊಡುಗೆ ಸಮಾರಂಭವನ್ನು ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳು ಹಾಗೂ ಕುಲಸಚಿವರಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರವರು ವಹಿಸಿದ್ದರು. ಅವರು ಮಾತನಾಡಿ, “ವಿದ್ಯಾರ್ಥಿಗಳು ಜೀವನದ ಮುಂದಿನ ಹಂತಕ್ಕೆ ಕಾಲಿಡುವ ಈ ಸಂದರ್ಭದಲ್ಲಿ, ಜ್ಞಾನ, ಕೌಶಲ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಸಮಾಜದ ಸೇವೆಗೆ ಬಳಸಬೇಕಾಗಿದೆ. ಈ ವಿಶ್ವವಿದ್ಯಾಲಯ ನಿಮ್ಮ ಬದುಕಿನಲ್ಲಿ ಶಾಶ್ವತ ಸ್ಫೂರ್ತಿಯಾಗಿ ಉಳಿಯಲಿ” ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ವಿಶ್ಣುಕಾಂತ ಎಸ್. ಚಟಪಲ್ಲಿ ಅವರು,
“ವಿದ್ಯಾಭ್ಯಾಸ ಎನ್ನುವುದು ಕೇವಲ ಪದವಿ ಪಡೆಯುವುದು ಮಾತ್ರವಲ್ಲ, ಜ್ಞಾನವನ್ನು ಸಮಾಜ ಪರಿವರ್ತನೆಗೆ ಬಳಸುವ ಜವಾಬ್ದಾರಿಯಾಗಿದೆ” ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.
ಗೌರವದ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಬಸವರಾಜ ಲಕ್ಕಣ್ಣವರ ಅವರು, “ಯುವಕರು ಶಿಸ್ತಿನೊಂದಿಗೆ ಮತ್ತು ಗುರಿಯೊಂದಿಗೆ ಮುಂದೆ ಸಾಗಿದಾಗ ಯಶಸ್ಸು ಅನಿವಾರ್ಯ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಅಬ್ದುಲ್ ಅಜೀಜ್ ಮುಲ್ಲ, ಡಾ. ಗಿರೀಶ್ ದೀಕ್ಷಿತ್, ಮೃತ್ಯುಂಜಯ ಮೆಣಸಿನಕಾಯಿ ವಿಶೇಷ ಅಧಿಕಾರಿ ಉಮೇಶ್ ಬಾರಕೇರ ಹಾಗೂ ಇತರರು ಇದ್ದರು. ಕಾರ್ಯಕ್ರಮದ ಭಾಗವಾಗಿ ವಿಶ್ವವಿದ್ಯಾಲಯದ ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಬೀಳ್ಕೊಡುಗೆ ಸಮಾರಂಭವನ್ನು, ಸೋಮಲಿಂಗ ಕರಣಿ – ಕಾರ್ಯಕ್ರಮ ಸಂಯೋಜಕರು, ಸಾಮಾಜ ಕಾರ್ಯ ವಿಭಾಗ, ಮಂಜುನಾಥ ಚೆನ್ನಪ್ಪಗೌಡರ್ – ವಿಶೇಷಾಧಿಕಾರಿ (ಶೈಕ್ಷಣಿಕ), ಡಾ. ಅರ್ಚನಾ ಎನ್.ಎಲ್ – ಕಾರ್ಯಕ್ರಮ ಸಂಯೋಜಕಿ, ಸಾರ್ವಜನಿಕ ಆರೋಗ್ಯ ವಿಭಾಗ
ಇವರು ಸಂಯೋಜಿಸಿದರು.
ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP