

ಬಳ್ಳಾರಿ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭತ್ತ ಮತ್ತು ಇನ್ನಿತರೆ ಬೆಳೆಗಳು ನಷ್ಟವಾಗಿದ್ದು ಸರ್ಕಾರ ತಕ್ಷಣವೇ ಬೆಳೆ ನಷ್ಟ ಪರಿಹಾರ ಘೋಷಿಸಲು ಆಗ್ರಹಿಸಿ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿರುವ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕವು, ಮುಖ್ಯಮಂತ್ರಿಗಳು ಮತ್ತು ಕೃಷಿ ಸಚಿವರಿಗೆ ಪತ್ರ ಬರೆದು, ಆದಷ್ಟು ಶೀಘ್ರದಲ್ಲೇ ನಷ್ಟ ಪರಿಹಾರ ಸರ್ವೇ ನಡೆಸಿ, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಘೋಷಣೆ ಮಾಡಿ, ವಿತರಣೆ ಮಾಡಬೇಕು ಎಂದು ಅವರು ಕೋರಿದ್ದಾರೆ.
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ್ ಮತ್ತು ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಅವರು, ಪ್ರತಿ ಎಕರೆ ಭತ್ತಕ್ಕೆ ಭತ್ತಕ್ಕೆ 8 ರಿಂದ 10 ಕ್ವಿಂಟಾಲ್ ಇಳುವರಿ ಕಡಿಮೆಯಾಗಲಿದೆ. ಅಲ್ಲದೇ, ಬೆಳೆದು ನಿಂತಿರುವ ಪೈರು ಕೂಡ ನೆಲ ಕಚ್ಚಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ಪ್ರತಿ ಎಕರೆ ಭತ್ತಕ್ಕೆ ರೂ.20,000 ನಷ್ಟ ಪರಿಹಾರ ವಿತರಣೆ ಮಾಡಬೇಕು. ಪ್ರತಿ ಕ್ವಿಂಟಲ್ ಭತ್ತಕ್ಕೆ ರೂ.3,500 ಬೆಂಬಲ ಬೆಲೆ ಘೋಷಣೆ ಮಾಡಬೇಕು. ಭತ್ತ ಖರೀದಿ ಕೇಂದ್ರವನ್ನು ನವಂಬರ್‍ನಲ್ಲಿಯೇ ತೆರೆಯಬೇಕು ಎಂದು ಅವರು ಆಗ್ರಹಿಸಿದರು.
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದ ಸದಸ್ಯರಾದ ಹೊನ್ನೂರಸ್ವಾಮಿ, ಹನುಮಂತ, ಶ್ರೀನಿವಾಸ್, ಅಂಜಿನೆಯ, ದುರುಗಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್