


ಬಳ್ಳಾರಿ, 23 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಇಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಪುನರುಜ್ಜೀವನೆ ಅತ್ಯಂತ ಅಗತ್ಯವಾಗಿದೆ. ಪೌಷ್ಠಿಕ ಆಹಾರದ ಮಹತ್ವ ಜನರಲ್ಲಿ ಅರಿವು ಮೂಡಿಸುವ ಮೂಲಕ ಉತ್ತಮ ಆಹಾರಕ್ಕಾಗಿ ಕೈಜೋಡಿಸೋಣ ಎಂದು ಹಗರಿಯ ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ಪಾಲಯ್ಯ.ಪಿ ಅವರು ತಿಳಿಸಿದ್ದಾರೆ.
‘ವಿಶ್ವ ಆಹಾರ ದಿನ’ದ ಅಂಗವಾಗಿ “ಉತ್ತಮ ಆಹಾರ ಮತ್ತು ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಕೈಜೋಡಿಸೋಣ” ಎಂಬ ಘೋಷವಾಕ್ಯದೊಂದಿಗೆ ಬಳ್ಳಾರಿ ತಾಲ್ಲೂಕಿನ ಹಗರಿಯ ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಾಂಪ್ರದಾಯಿಕ ಹಾಗೂ ಸಿರಿಧಾನ್ಯ ಆಧಾರಿತ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರದ (ಮಣ್ಣು ವಿಜ್ಞಾನ) ವಿಜ್ಞಾನಿ ಡಾ.ರವಿ.ಎಸ್ ಅವರು ಮಾತನಾಡಿ, ಆರೋಗ್ಯಕರ ಆಹಾರವನ್ನು ಉತ್ಪಾದಿಸಲು ಮಣ್ಣಿನ ಪೌಷ್ಟಿಕತೆ ಮಹತ್ವದ ಪಾತ್ರವಹಿಸುತ್ತದೆ. ಮಣ್ಣು ಮತ್ತು ಆಹಾರ ಎರಡೂ ಪರಸ್ಪರ ಸಂಬ0ಧಿತವಾಗಿವೆ ಎಂದು ಅಭಿಪ್ರಾಯಪಟ್ಟರು.
ಜಿಪಂ ನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಅವರು ಮಾತನಾಡಿ, ಮಹಿಳೆಯರು ತಮ್ಮ ಸಾಂಪ್ರದಾಯಿಕ ಪಾಕಕಲೆ ಮೂಲಕ ಆರೋಗ್ಯಕರ ಹಾಗೂ ಸ್ಥಳೀಯ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಇಂತಹ ಸ್ಪರ್ಧೆಗಳು ಅವರ ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂದರು.
ವಿಜ್ಞಾನಿ (ಆಹಾರ ಮತ್ತು ಪೋಷಣೆ) ಡಾ.ರಾಜೇಶ್ವರಿ.ಆರ್ ಅವರು ಮಾತನಾಡಿ, ಸಿರಿಧಾನ್ಯಗಳು ನಮ್ಮ ಸಂಪ್ರದಾಯದ ಭಾಗವಾಗಿದ್ದು, ಪೌಷ್ಠಿಕತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದವು. ಇಂತಹ ಸ್ಪರ್ಧೆಗಳ ಮೂಲಕ ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ಆರೋಗ್ಯಕರ ಆಹಾರದ ಅರಿವು ಪಡೆಯುತ್ತಾರೆ ಎಂದು ತಿಳಿಸಿದರು.
ಇನ್ನೋರ್ವ ವಿಜ್ಞಾನಿ (ವಿಸ್ತರಣೆ ಶಿಕ್ಷಣ) ಡಾ.ನವೀನ್ ಕುಮಾರ್.ಪಿ ಅವರು ಮಾತನಾಡಿ, ಗ್ರಾಮೀಣ ಮಹಿಳೆಯರು ತಮ್ಮ ಪಾಕಕೌಶಲ್ಯವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಇಂತಹ ಕಾರ್ಯಕ್ರಮಗಳು ಮಹಿಳಾ ಸಬಲೀಕರಣಕ್ಕೆ ಮಾರ್ಗದರ್ಶಿಯಾಗುತ್ತವೆ ಎಂದರು.
ಸ್ಥಳೀಯವಾಗಿ ಲಭ್ಯವಿರುವ ಪೌಷ್ಠಿಕ ಆಹಾರ ಪದಾರ್ಥಗಳ ಬಳಕೆಯನ್ನು ಉತ್ತೇಜಿಸುವುದು ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ಪುನರುಜ್ಜೀವಗೊಳಿಸುವ ಉದ್ದೇಶಕ್ಕಾಗಿ ಸುಮಾರು 30 ಮಂದಿ ಗ್ರಾಮೀಣ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಸಾಂಪ್ರದಾಯಿಕ ಪದಾರ್ಥಗಳನ್ನು ಸಿರಿಧಾನ್ಯಗಳ ಬಳಕೆಯಿಂದ ಪೌಷ್ಠಿಕ ಹಾಗೂ ಸವಿಯಾದ ರೀತಿಯಲ್ಲಿ ತಯಾರಿಸಿ ತಮ್ಮ ಪಾಕಕೌಶಲ್ಯ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಸುಮಾರು 120 ಮಂದಿ ಶಾಲಾ ಮಕ್ಕಳು ಪಾಲ್ಗೊಂಡು ಪೌಷ್ಠಿಕ ಆಹಾರ ಸೇವನೆ ಮತ್ತು ಆಹಾರ ವ್ಯರ್ಥತೆಯನ್ನು ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ವಿಜ್ಞಾನ ಕೇಂದ್ರದ ಅಧಿಕಾರಿ-ಸಿಬ್ಬಂದಿ ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್