


ರಾಯಚೂರು, 23 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ತೋರಿದಂತಹ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾದದ್ದು, ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿದಾಯಕವಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ ಅವರು ಹೇಳಿದರು.
ಅಕ್ಟೋಬರ್ 23ರ ಗುರುವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮ0ದಿರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲ್ಯದಿಂದಲೇ ಕುದುರೆ ಸವಾರಿ, ಕತ್ತಿ ಬಳಸುವ ಪರಿಗಳ ಬಗ್ಗೆ ತರಬೇತಿ ಪಡೆದಿದ್ದರು. ಚನ್ನಮ್ಮ ಅವರು ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ. ಚನ್ನಮ್ಮ ಅವರ ಜೀವನ ಮತ್ತು ಹೋರಾಟ ನಾಡಿನ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿದಾಯಕವಾಗಿದೆ. ಮಹಿಳೆಯರು ಕೂಡ ಸ್ವಾವಲಂಬಿಗಳಾಗಿ ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ವೇಳೆ ರಾಯಚೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್ ಅವರು ಮಾತನಾಡಿ, ಕಿತ್ತೂರಿನ ರಾಣಿ ಚನ್ನಮ್ಮ ಅವರು ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ನಡೆಸಿ ದೇಶದ ಸ್ವಾತಂತ್ರ‍್ಯಕ್ಕಾಗಿ ಶ್ರಮಿಸಿದ್ದಾರೆ. ಸ್ವಾತಂತ್ರ‍್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆಯಾಗಿದ್ದ ಚೆನ್ಮಮ್ಮ ಅವರು ಬ್ರಿಟಿಷ್ ಸರ್ಕಾರ ಜಾರಿಗೊಳಿಸಿದ್ದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯನ್ನು ವಿರೋಧಿಸಿದರು.
ಚೆನ್ನಮ್ಮನವರ ಜಯಂತಿಯನ್ನು ಕೇವಲ ಸರ್ಕಾರಿ ಕಚೇರಿಯಲ್ಲಿ ಮಾತ್ರವಲ್ಲ; ಪ್ರತಿ ಶಾಲೆಗಳಲ್ಲಿ, ಮನೆಮನೆಗಳಲ್ಲಿ ನಡೆಯುವಂತಾಗಬೇಕು. ಮುಂದಿನ ಪೀಳಿಗೆಗೆ ರಾಣಿ ಚೆನ್ನಮ್ಮರಂತಹ ವೀರ ಮಹಿಳೆಯರ ಆದರ್ಶಗಳನ್ನು ತಲುಪಿಸುವ ಕೆಲಸವಾಗಬೇಕಿದೆ ಎಂದರು.
ಈ ವೇಳೆ ಉಪನ್ಯಾಸಕರಾಗಿ ಪರಮೇಶ್ವರ ಸಾಲಿಮಠ ಅವರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನವರ ಧೈರ್ಯ, ಹೋರಾಟ, ಸ್ವಾಭಿಮಾನ ಮಹಿಳಾಕುಲಕ್ಕೆ ಸ್ಪೂರ್ತಿದಾಯಕವಾದುದು. ಬ್ರಿಟಿಷರ ವಿರುದ್ಧ ವೀರಾವೇಷದಿಂದ ಹೋರಾಡಿ ವೀರಮರಣವನ್ನಪ್ಪಿದ ಚೆನ್ನಮ್ಮನವರ ತ್ಯಾಗ, ಆದರ್ಶ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅಂತಹ ಹೋರಾಟಗಾರ್ತಿ ನಮ್ಮ ಕನ್ನಡನಾಡಿನವರು ಎಂದು ಹೇಳಿಕೊಳ್ಳಲು ಬಹಳ ಹೆಮ್ಮಯಾಗುತ್ತದೆ. ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಪರಶುರಾಮ್, ಸಮಾಜದ ಮುಖಂಡರಾದ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಹರಿವಿ ನಾಡಗೌಡ, ನಿರ್ಮಲ ಬೆಣ್ಣೆ, ವಿಜಯಲಕ್ಷ್ಮಿ ದೇಸಾಯಿ, ಮಹಾಂತೇಶ್ ಪಾಟೀಲ್, ಈರಮ್ಮ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ದಂಡಪ್ಪ ಬಿರಾದಾರ್ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂಗಮೇಶ್ ಹಾಗೂ ಪ್ರಾರ್ಥನೆಯನ್ನು ಪ್ರತಿಭಾ ಗೋನಾಳ ಅವರು ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್