ವಿಜಯಪುರ, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅನ್ನದಾತ ಎಲ್ಲರಿಗೂ ಅನ್ನದಾತ, ಆದರೆ ಸಿಂದಗಿ ಶಾಸಕರು ಕೇವಲ ಕಾಂಗ್ರೆಸ್ ಕಾರ್ಯಕರ್ತರ ಬೆಳೆ ಸಮೀಕ್ಷೆ ಮಾಡುವುದಾಗಿ ಅಧಿಕಾರಿಗಳಿಗೆ ಹೇಳಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದು ನೋವಿನ ಸಂಗತಿ, ಅನ್ನದಾತನಲ್ಲಿಯೂ ಪಕ್ಷ ಬೇಧವೇಕೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ತೀವ್ರ ಅಸಮಾಧಾನದಿಂದ ಕೂಡಿದ ಪ್ರಶ್ನೆಯನ್ನು ಕೇಳಿದರು.
ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನದಾತನ ಎಲ್ಲರಿಗೂ ಅನ್ನದಾತ, ಕಾಂಗ್ರೆಸ್, ಬಿಜೆಪಿ ಎನ್ನುವ ಪಕ್ಷ ಬೇಧ ಮಾಡಬಾರದು, ಆದರೆ ಸಿಂದಗಿ ಶಾಸಕರು ಈ ನಿಟ್ಟಿನಲ್ಲಿ ಪಕ್ಷಬೇಧ ತೋರಿದ್ದು ನಿಜವೇ ಆದಲ್ಲಿ ಅದು ಖಂಡನೀಯ, ಅಲ್ಲದೇ, ಬೆಳೆ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ದಾಖಲಾಗುತ್ತಿದ್ದು, ಮುಂದೆ ರೈತರಿಗೆ ಪರಿಹಾರ ಸಿಗಲು ಹೇಗೆ ಸಾಧ್ಯ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ನೀಡಿರುವ ಪರಿಹಾರದಂತೆ ಈ ಸರ್ಕಾರ ಪರಿಹಾರ ಕಲ್ಪಿಸಬೇಕು. ತಕ್ಷಣವೇ ಸಮೀಕ್ಷೆ ಮೂಲಕ ಪರಿಹಾರ ಕೊಡಬೇಕು ಎಂದರು.
ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಬಬಲೇಶ್ವರ ಮತಕ್ಷೇತ್ರದ ಡೋಣಿ ನದಿ ಪಾತ್ರದಲ್ಲಿ ಎಲ್ಲ ರೀತಿಯ ಬೆಳೆಗಳು ಹಾನಿಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೆಳೆಗಳ ಸಮೀಕ್ಷೆ ಮಾತ್ರ ನಡೆಸುತ್ತಿರುವುದು ಖಂಡನೀಯ ಎಂದರು.
ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ರೈತರಿಗೆ ವಿಮೆ ಕಂಪನಿಗಳಿಂದ ಪರಿಹಾರ ಕೊಡಲಾಗುತ್ತಿದೆ. ಆದರೆ, ಕೆಲ ಮಧ್ಯವರ್ತಿಗಳು ನಾವು ಪರಿಹಾರ ಮಾಡಿಸಿದ್ದೇವೆ ಎಂದು ಹೇಳಿ, ರೈತರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ, ಇದನ್ನು ತಡೆಗಟ್ಟುವುದು ಅತ್ಯಂತ ಅಗತ್ಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕ ರಮೇಶ ಭೂಸನೂರ, ಸಂಜೀವ ಐಹೊಳಿ, ಮಳುಗೌಡ ಪಾಟೀಲ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande