ಕೊಪ್ಪಳ, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬಾಲ್ಯವಿವಾಹ ನಿಷೇಧ ಕಾನೂನು, ಅಪರಾಧಕ್ಕಿರುವ ಶಿಕ್ಷೆ ಪ್ರಮಾಣ ಮುಂತಾದವುಗಳ ಕುರಿತು ವಿವಾಹಗಳು ನಡೆಯುವ ದೇವಸ್ಥಾನ, ಶಾದಿಮಹಲ್, ಕಲ್ಯಾಣ ಮಂಟಪ ಹಾಗೂ ಫಂಕ್ಷನ್ ಹಾಲ್‍ಗಳಲ್ಲಿ ಶಾಶ್ವತ ಫಲಕ ಹಾಗೂ ಗೋಡೆಬರಹವನ್ನು ಕಡ್ಡಾಯವಾಗಿ ಬರೆಯಿಸಿ, ಪ್ರದರ್ಶಿಸಬೇಕು.
ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಕರ್ನಾಟಕ ತಿದ್ದುಪಡಿ ಕಾಯ್ದೆ-2016 ರನ್ವಯ 18 ವರ್ಷದೊಳಗಿನ ಹೆಣ್ಣು ಮಕ್ಕಳ ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳ ವಿವಾಹವು ಶಿಕ್ಷಾರ್ಹ ಅಪರಾಧವಾಗಿದೆ. ಕಾಯ್ದೆಯ ಕಲಂ 9 ರನ್ವಯ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗುವನ್ನು ವಿವಾಹ ಮಾಡಿಕೊಂಡ ಪುರುಷ, ಕಲಂ 10 ಮತ್ತು 11 ರನ್ವಯ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹವನ್ನು ಆಯೋಜಿಸಿದವರು, ಆಯೋಜಿಸಲು ಉತ್ತೇಜನ ಅಥವಾ ಪ್ರೋತ್ಸಾಹ ನೀಡುವವರು ಮತ್ತು ಬಾಲ್ಯವಿವಾಹದಲ್ಲಿ ಭಾಗವಹಿಸುವವರಿಗೆ 1 ವರ್ಷದಿಂದ 2 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷಗಳ ದಂಡ ವಿಧಿಸಬಹುದಾಗಿರುತ್ತದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಬಾಲ್ಯವಿವಾಹಗಳನ್ನು ತಡೆಗಟ್ಟುವುದು ಅತ್ಯಗತ್ಯವಾಗಿದ್ದು, ಕಾಯ್ದೆಯ ಕುರಿತು ಸಮುದಾಯಗಳಲ್ಲಿ ಮತ್ತಷ್ಟು ಜಾಗೃತಿಯನ್ನು ಮೂಡಿಸುವಂತೆ ನಿರ್ದೇಶಿಸಿದೆ. ಆದ್ದರಿಂದ ವಿವಾಹ ಆಯೋಜಕರು, ದೇವಸ್ಥಾನ, ಶಾದಿ ಮಹಲ್‍ಗಳ, ಉಸ್ತುವಾರಿ ಸದಸ್ಯರು, ಕಲ್ಯಾಣ ಮಂಟಪ ಮತ್ತು ಫಂಕ್ಷನ್ ಹಾಲ್‍ಗಳ ವ್ಯವಸ್ಥಾಪಕರುಗಳಿಗೆ ಅವರುಗಳ ವ್ಯಾಪ್ತಿಯಲ್ಲಿ ಆಯೋಜಿಸುವ ಸಾಮೂಹಿಕ ಅಥವಾ ವೈಯಕ್ತಿಕ ವಿವಾಹಗಳಲ್ಲಿ ಅಥವಾ ಅಧೀನದಲ್ಲಿರುವ ಸ್ಥಳದಲ್ಲಿ ಬಾಲ್ಯವಿವಾಹ ಜರುಗದಂತೆ ಸೂಕ್ತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬಾಲ್ಯವಿವಾಹ ನಡೆದಲ್ಲಿ, ಅಂತವರನ್ನು ಹಾಗೂ ಸರಕು ಮತ್ತು ಸೇವೆಗಳನ್ನು ಒದಗಿಸಿದವರನ್ನೂ ಸಹ ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಲಾಗುವುದಾಗಿ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್